

ಮಡಿಕೇರಿ : ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ್ ಸತೀಶ್ *ದಾವಣೆಗೆರೆ ಅವರನ್ನು ಕಾನೂನು ಬಾಹಿರವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಮಡಿಕೇರಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಜ. ತಿಮ್ಮಯ್ಯ ವೃತ್ತದ ಬಳಿ ಸೇರಿದ ಸಂಘಟನೆಯ ಪ್ರಮುಖರು, ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಿಂಜಾವೇ ಪ್ರಮುಖ ಅಜಿತ್‌ಕುಕ್ಕೇರ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂದೂ ಕಾರ್ಯಕರ್ತರನ್ನು ಧಮನ ಮಾಡುವ ಕಾರ್ಯಕ್ಕೆ ಕೈ ಹಾಕಿದೆ. ಸಂಘಟನೆಯಿಂದ ಪ್ರತಿ ವರ್ಷವೂ ಅಖಂಡ ಭಾರತ ಸಂಕಲ್ಪ ಕಾರ್ಯಕ್ರಮ ಮಾಡುತ್ತಾ ಬಂದಿದ್ದೇವೆ. ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಸತೀಶ್ *ದಾವಣೆಗೆರೆ ಕೋಮುಪ್ರಚೋದನಕಯಾಗಿ ಮಾತನಾಡಿದ್ದಾರೆ ಎಂದು ಪ್ರಕರಣ ದಾಖಲಿಸಿ ಅವರನ್ನು ತಡ ರಾತ್ರಿ ಅಕ್ರಮವಾಗಿ ಬಂಧಿಸಲಾಗಿದೆ. ಪೊಲೀಸ್ ಇಲಾಖೆ ಮೂಲಕ ಸರ್ಕಾರ ಈ ಕೃತ್ಯ ಮಾಡಿಸಿದೆ ಎಂದು ಆರೋಪಿಸಿದರು.
ಸತೀಶ್ ದಾವಣೆಗೆರೆ ಅವರನ್ನು ಗೌರಿಬಿದನೂರು ಪೊಲೀಸರು ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಕೋಮು ದ್ವೇಷ ಭಾಷಣ ಮಾಡಿದ್ದಾರೆ ಎಂಬ ನೆಪವೊಡ್ಡಿ ಕೇಸ್ ದಾಖಲಿಸಿ 4 ದಿನಗಳ ಬಳಿಕ ಮಧ್ಯರಾತ್ರಿ ಅಕ್ರಮ ಪ್ರವೇಶ ಮಾಡಿ ಮನೆಯವರನ್ನು ಬೆದರಿಸಿ ಕಾನೂನು ಬಾಹಿರವಾಗಿ ಬಂಧನ ಮಾಡಿದ್ದಾರೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ನಗರಸಭೆ ಬಿಜೆಪಿ ಸದಸ್ಯರು, ಹಿಂದೂ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.