ಸತತ ಮಳೆಗೆ ಮನೆ ಗೋಡೆ ಕುಸಿತ

H23 Unakal House 3
Published on

ಹುಬ್ಬಳ್ಳಿ: ನಾಲ್ಕೈದು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದ ಘಟನೆ ಇಲ್ಲಿನ ಉಣಕಲ್ ಸಾಯಿ ನಗರ ರಸ್ತೆಯಲ್ಲಿ ಬುಧವಾರ ನಸುಕಿನ ಜಾವ ಸಂಭವಿಸಿದೆ.

ರೈತ ಕಲ್ಲಪ್ಪ ಸೊಲಬಪ್ಪ ನವಲಗುಂದ ಎಂಬುವರ ಮನೆಯ ಗೋಡೆ ಕುಸಿದಿದೆ. ಮನೆ ಜನರು ಬೆಳಗಿನಜಾವದ ಸವಿ ನಿದ್ರೆಯಲ್ಲಿದ್ದಾಗ ಪಕ್ಕದಲ್ಲೇ ಗೋಡೆ ಬಿದ್ದಿದ್ದು, ಸ್ವಲ್ಪದರಲ್ಲೇ ಭಾರಿ ಅನಾಹುತ ತಪ್ಪಿದೆ.

ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಹಡಿ ಮನೆಯ ಭಾಗಶಃ ಗೋಡೆ ಕುಸಿದು ಬಿದ್ದಿದೆ. ಮಹಿಳೆಯರು, ನಾಲ್ಕು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಲ್ಲಪ್ಪ ಅವರ ಮನೆಯ ಗೋಡೆ ಕುಸಿತದ ಕುರಿತು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ತಹಸೀಲ್ದಾರ್ ಶಶಿಧರ ಮಾಡ್ಯಾಳ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಪರಿಹಾರಕ್ಕೆ ಮೊರೆ: ಮಳೆ ಪ್ರಮಾಣ ಹೆಚ್ಚಾದ ಕಾರಣ ಹೊಲದಲ್ಲಿ ಬೆಳೆದ ಬೆಳೆ ಹಾಳಾಗಿದೆ. ಇದೇ ವೇಳೆ ಮನೆಯ ಗೋಡೆಯೂ ಕುಸಿದಿದೆ. ಮನೆಯಲ್ಲಿ ಮಹಿಳೆಯರು, ಮಕ್ಕಳು ಇದ್ದಾರೆ. ಜೀವನ ನಡೆಸುವುದು ದುಸ್ಸಾಧ್ಯವಾಗಿದೆ. ಹಾಗಾಗಿ, ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ನಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಕಲ್ಲಪ್ಪ ನವಲಗುಂದ ಹಾಗೂ ಪುತ್ರ ಮಂಜುನಾಥ ನವಲಗುಂದ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net