

ಹಾಸನ: ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆ ಮಾಡಿಕೊಳ್ಳಬೇಕಾದಲ್ಲಿ ಸತತ ಪ್ರಯತ್ನ, ಶ್ರದ್ಧೆಯಿಂದ ಓದುವಿಕೆ ಮೈಗೂಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಹೇಳಿದರು.
ನಗರದ ಎಂ.ಜಿ. ರಸ್ತೆಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ವಾಣಿಜ್ಯ ಸಂಭ್ರಮ 2023 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭೂ ಮಂಡಲದಲ್ಲಿ ಮನುಷ್ಯ ಜಾತಿ ಅತ್ಯಂತ ಶ್ರೇಷ್ಠವಾದದ್ದು, ಏಕೆಂದರೆ ಮನುಷ್ಯನನ್ನು ಬಿಟ್ಟರೆ ಉಳಿದ ಯಾವ ಜೀವಿಗೂ ಯೋಚಿಸುವ, ಸಾಧಿಸುವ, ತಿಳಿದುಕೊಳ್ಳುವ ಯಾವ ಗುಣಗಳು ಇರುವುದಿಲ್ಲ. ಮನುಷ್ಯರಾದ ನಮಗೆ ದೇವರು ಎಲ್ಲವನ್ನೂ ಕೊಟ್ಟಿದ್ದಾನೆ. ಮನುಷ್ಯ ತನ್ನ ಜೀವಿತಾವಧಿಯಲ್ಲಿ ತಮ್ಮ ಬದುಕನ್ನು ಸಮಾಜದ ಉಳಿತಿಗಾಗಿ ಮುಡಿಪಾಗಿಡಬೇಕಾಗಿದೆ ಎಂದರು.
ಸಾಮಾನ್ಯವಾಗಿ ಇಂದಿನ ಯುವಕರಲ್ಲಿ ನಿರಾಸಕ್ತಿ ಹೆಚ್ಚಾಗಿರುವುದರಿಂದ ಅವರುಗಳು ಸಾಧನೆಗೆ ಅಡ್ಡಿಯುಂಟಾಗಲು ಕಾರಣವಾಗಿದೆ. ಕೇವಲ ವೈದ್ಯಕೀಯ, ಎಂಜಿನಿಯರಿಂಗ್, ಐಐಟಿ ಓದಿದವರು ಮಾತ್ರ ಸಾಧನೆ ಮಾಡುತ್ತಾರೆ. ಹಳ್ಳಿಗಾಡಿನಿಂದ ಬಂದ ನಾವುಗಳು ಕೇವಲ ಸಾಮಾನ್ಯ ಪದವಿ ಪಡೆದ ನಮಗೆ ಸಾಧನೆ ಕಷ್ಟ ಎಂಬ ಕಲ್ಪನೆಯಲ್ಲಿ ಮುಳುಗಿ ಹೋಗಿದ್ದಾರೆ. ಇದರಿಂದ ಯುವಕರು ಆಚೆ ಬರಬೇಕು ಸ್ಪರ್ಧಾತ್ಮಕ ಪರೀಕ್ಷೆ ಎಂದರೆ ಎಲ್ಲರಿಗೂ ಒಂದೇ ಮಾನದಂಡ ಎಂದು ಸ್ಫೂರ್ತಿಯ ಮಾತುಗಳನ್ನು ಹೇಳಿದರು.
ನಾನು ಎಂಜಿನಿಯರಿಂಗ್ ಅಧ್ಯಯನ ಮಾಡಬೇಕಾದರೆ ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕು ಎಂದು ನಿರ್ಧರಿಸಿ ಮೊದಲ ಪ್ರಯತ್ನದಲ್ಲಿ ವಿಫಲನಾದೆ. ನಂತರ ಸತತ ನಾಲ್ಕು ಬಾರಿ ಪರೀಕ್ಷೆ ಎದುರಿಸಿ ಐದನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಐಪಿಎಸ್ ಹುದ್ದೆಗೆ ಬಂದಿದ್ದೇನೆ. ಸಾಧನೆ ಮಾಡಲು ಎಷ್ಟು ಬಾರಿ ಪರೀಕ್ಷೆ ಎದುರಿಸಿದೆ ಎಂಬುವುದು ಮುಖ್ಯವಲ್ಲ. ಬದಲಾಗಿ ಸಾಧಿಸುವುದು ಮುಖ್ಯ. ಹಾಗಾಗಿ ಯುವಕ-ಯುವತಿಯರು ತಮ್ಮ ಗುರಿ ಸಾಧನೆ ಮಾಡಬೇಕಾದರೆ ಧೃತಿಗೆಡದೆ ಸಾಧಿಸುವ ಛಲವನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಹಾಸನದಲ್ಲಿ ನಾನು ಗಮನಿಸಿದ ಹಾಗೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚಾಗಿವೆ. ಯುವತಿಯರು ಕೌಟುಂಬಿಕ ಸಮಸ್ಯೆಗೆ ಒಳಗಾಗಿ ಸಮಾಜದ ಸ್ಥಾನಮಾನಗಳಿಗೆ ಅಂಜಿ ಸಾವಿಗೆ ಶರಣಾಗುತ್ತಿರುವ ಪ್ರಕರಣಗಳನ್ನು ನೋಡುತ್ತಿದ್ದೇವೆ. ಯುವತಿಯರು ಕೌಟುಂಬಿಕ ಸಮಸ್ಯೆ ಇದ್ದಲ್ಲಿ ನೇರವಾಗಿ ಪೊಲೀಸ್ ಠಾಣೆಗೆ ಬಂದು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬೇಕು. ತಮ್ಮ ಸ್ವಂತ ಶಕ್ತಿಯ ಮೇಲೆ ಬದುಕುವುದನ್ನು ಕಲಿಯಬೇಕು. ವಿದ್ಯಾರ್ಥಿನಿಯರು ಪ್ರತಿಯೊಂದು ವಿಚಾರದಲ್ಲೂ ಧೈರ್ಯವಾಗಿ ತಮ್ಮ ಜೀವನವನ್ನು ಕಟ್ಟಿಕೊಂಡರೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾಲೇಜಿನ ಪ್ರಬಾರ ಪ್ರಾಂಶುಪಾಲ ಡಾ.ಡಿ. ಶ್ರೀನಿವಾಸ್, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಜಿ.ಜಿ. ರಾಜಶೇಖರ್, ಅಧ್ಯಾಪರಾದ ಯೋಗೇಶ್, ಶಂಕರ್ ರೆಡ್ಡಿ, ಡೇವಿಡ್ ಕುಮಾರ್ ಹಾಗೂ ಇತರರು ಹಾಜರಿದ್ದರು.