ಸತತ ಪ್ರಯತ್ನದಿಂದ ಗುರಿ ತಲುಪಲು ಸಾಧ್ಯ

16rajesh7
Published on

ಚಾಮರಾಜನಗರ: ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ಮಾತ್ರ ಗುರಿ ತಲುಪಲು ಸಾಧ್ಯವಾಗುತ್ತದೆ ಎಂಬುದನ್ನು ಅರಿತುಕೊಂಡು ಮುನ್ನಡೆಯಬೇಕಿದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಹಾಗೂ ಹಿರಿಯ ಜಾನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್ ಸಲಹೆ ನೀಡಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಶುಕ್ರವಾರ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ ಮತ್ತು ರೇಂಜರ್ಸ್ ಹಾಗೂ ಅಭಿವ್ಯಕ್ತಿ ಚಟುವಟಿಕೆಗಳ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತಮ್ಮ ಮಕ್ಕಳು ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಯಾಗಬೇಕು, ದೊಡ್ಡ ಹುದ್ದೆಯಲ್ಲಿರಬೇಕು ಎಂಬ ಆಶಯವನ್ನು ಪಾಲಕರು ಇಟ್ಟುಕೊಂಡಿರುತ್ತಾರೆ. ಮಕ್ಕಳು ಅವರ ಆಸೆಯನ್ನು ಈಡೇರಿಸಲು ಸತತವಾಗಿ ಶ್ರಮಿಸುವ ಅಗತ್ಯವಿದೆ. ಮಕ್ಕಳು ದಾರಿತಪ್ಪಿದರೆ, ಹಾಳಾದರೆ ತಂದೆ-ತಾಯಿಗೆ ಹಾಗೂ ಸಮಾಜಕ್ಕೆ ಅಪಕೀರ್ತಿ ಬರುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಅಧ್ಯಯನ ಮಾಡಿ ಉತ್ತಮ ಹುದ್ದೆಯನ್ನು ಅಲಂಕರಿಸಿ ಎಂದು ಹೇಳಿದರು.

ಈ ವೇಳೆ ಸಾಂಸ್ಕೃತಿಕ, ಕ್ರೀಡೆ ಹಾಗೂ ಇನ್ನಿತರೆ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಗುರುಪ್ರಸಾದ್, ಐಕ್ಯೂಎಸಿ ಸಮಿತಿ ಸಂಚಾಲಕ ಡಾ.ಚಿನ್ಮಯ್ ಭಟ್, ಕ್ರೀಡಾ ಸಮಿತಿ ಸಂಚಾಲಕ ಬಿ.ಗಣೇಶ್ ಪ್ರಕಾಶ್, ರಾಷ್ಟ್ರೀಯ ಸೇವಾ ಯೋಜನೆ ಸಂಚಾಲಕ ಡಾ.ಜಿ.ಮಲ್ಲೇಶ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಲೋಕೇಶ್, ಎಂ.ಕೆ.ಮಂಜುನಾಥ್, ರೇಂಜರ್ಸ್ ಮತ್ತು ಅಭಿವೃದ್ಧಿ ಸಮಿತಿ ಸಂಚಾಲಕಿ ಎಂ.ಚಂದ್ರಕಲಾ, ರೋವರ್ಸ್ ಸಮಿತಿ ಸಂಚಾಲಕ ಡಾ.ಪಿ.ಎಂ.ನಾಗೇಂದ್ರ ಕುಮಾರ್, ಪತ್ರಾಂಕಿಕ ವ್ಯವಸ್ಥಾಪಕಿ ವಿ.ಕೆ.ಪೂರ್ಣಿಮಾ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net