ಸತತ ಪ್ರಯತ್ನ, ಪರಿಶ್ರಮದಿಂದ ಸಾಧನೆ ಸಾಧ್ಯ

29-pnp 2
ಪಾಂಡವಪುರ ತಾಲೂಕಿನ ಬೆಳ್ಳಾಳೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲಿ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರನ್ನು ವಿದ್ಯಾರ್ಥಿಗಳು ಅಭಿನಂದಿಸಿದರು. ಮಹೇಶ್, ಶಾಂತರಾಜ್, ಎಲ್.ಕೇಶವಮೂರ್ತಿ, ಎಚ್.ಜಿ.ರಾಜಪಾಲ್, ಬೋರೇಗೌಡ ಇತರರು ಇದ್ದರು.
Published on

* ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅಭಿಮತ

* ಗುರುವಂದನೆ, ಸ್ನೇಹ ಸಮ್ಮಿಲನ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಪಾಂಡವಪುರ

ಗುರು, ಹಿರಿಯರು ಹಾಗೂ ಪಾಲಕರ ಮಾರ್ಗದರ್ಶನ ಮತ್ತು ಸತತ ಪ್ರಯತ್ನ, ಪರಿಶ್ರಮ ಇದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.

ತಾಲೂಕಿನ ಬೆಳ್ಳಾಳೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ 2004-05 ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದದರು.

ನಮ್ಮಿಂದ ವಿದ್ಯೆ ಕಲಿತು ಮಾರ್ಗದರ್ಶನ ಪಡೆಯುವ ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡಮಟ್ಟದಲ್ಲಿ ಸಾಧನೆ, ಯಶಸ್ಸು ಗಳಿಸಬೇಕೆಂಬುದು ಪ್ರತಿಯೊಬ್ಬ ಶಿಕ್ಷಕರ ಆಶಯವಾಗಿರುತ್ತದೆ. ವಿದ್ಯಾರ್ಥಿ ಜೀವನ ಸುಂದರ ಮತ್ತು ಮಹತ್ವವಾದದ್ದು. ವಿದ್ಯಾರ್ಥಿ ದಿಸೆಯಲ್ಲಿ ತೆಗೆದುಕೊಂಡ ನಿರ್ಧಾರಗಳು ಹಾಗೂ ನಿಮ್ಮ ಸುತ್ತಮುತ್ತಲ ವಾತಾವರಣದಿಂದಾಗಿ ಈ ಶಾಲೆಯಲ್ಲಿ ವಿದ್ಯೆ ಕಲಿತವರು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನ ಅಲಂಕರಿಸಲು ಸಾಧ್ಯವಾಗಿದೆ. ಈ ಹಿಂದೆ ಬಡತನದ ನಡುವೆ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಪಾಲಕರಿಗೆ ಕಷ್ಟವಾಗುತ್ತಿತ್ತು. ಆದರೆ, ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಅಂತಹ ಸಮಸ್ಯೆ ಇಲ್ಲ, ಎಷ್ಟೇ ಕಷ್ಟವಾದರೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕೆನ್ನುವುದು ಪ್ರತಿಯೊಬ್ಬ ಪಾಲಕರ ಅಭಿಲಾಷೆಯಾಗಿದೆ ಎಂದರು.

ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ಸಹಾಯಕ ನಿರ್ದೇಶಕ ಸಿ.ಎನ್.ಗೋಪಾಲೆಗೌಡ ಮಾತನಾಡಿ, ವಿದ್ಯೆ ಕಲಿಸಿದ ಶಿಕ್ಷಕರನ್ನು ಗುರುತಿಸಿ ಗುರುವಂದನೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಗುರುಗಳನ್ನು ದೇವರಿಗೆ ಹೋಲಿಸುವ ಸಂಸ್ಕೃತಿ ನಮ್ಮದು. ಇಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿರುವುದು ನಿಜಕ್ಕೂ ಹಿರಿಯ ವಿದ್ಯಾರ್ಥಿಗಳು ಸಾರ್ಥಕ ಕೆಲಸ. ಇದು ಸಮಾಜಕ್ಕೆ ಮಾದರಿಯಾಗಿದೆ. ವಿದ್ಯೆ ಕಲಿಸಿದ ಗುರುವನ್ನು ಮರೆತರೆ ಅಂತಹ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಇದೇ ವೇಳೆ ಎಲ್ಲ ಹಿರಿಯ ಶಿಕ್ಷಕರನ್ನು ವಿದ್ಯಾರ್ಥಿಗಳು ಅಭಿನಂದಿಸಿದರು. ಸಮಾರಂಭದಲ್ಲಿ ಬೆಳ್ಳಾಳೆ ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್, ಪ್ರಾಂಶುಪಾಲ ಶಾಂತರಾಜ್, ಹಿರಿಯ ಸಹಶಿಕ್ಷಕ ಎಲ್.ಕೇಶವಮೂರ್ತಿ, ಶಿಕ್ಷಕರಾದ ಎಚ್.ಜಿ.ರಾಜಪಾಲ್, ಅತ್ತಿಗಾನಹಳ್ಳಿ ಬೋರೇಗೌಡ, ದೈಹಿಕ ಶಿಕ್ಷಣ ಶಿಕ್ಷಕ ಕಡತನಾಳು ಶ್ರೀನಿವಾಸ್, ಆನಂದ್, ರಾಜು, ಸುಮತಿ, ವಿಜಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net