

ಸೋಮವಾರಪೇಟೆ: ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ವಾರ್ಷಿಕ ಪರೀಕ್ಷೆಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಗಳಿಸಿದ ಜಿಲ್ಲೆಯ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳಿಗೆ ಒಕ್ಕಲಿಗರ ಸಂಘದ ವತಿಯಿಂದ ನಗದು ಬಹುಮಾನದೊಂದಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಇಲ್ಲಿನ ಒಕ್ಕಲಿಗರ ಸಂಘದ ಶ್ರೀಗಂಧ ಸಭಾಂಗಣದಲ್ಲಿ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ಎಸ್ಸೆಸ್ಸೆಲ್ಸಿಯ 10 ಹಾಗೂ ಪಿಯುಸಿಯ 13 ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂ. ನಗದು ಪುರಸ್ಕಾರ ನೀಡಿ ಸನ್ಮಾನಿಸಿದರು.
ವಿದ್ಯೆಯೊಂದೇ ಭವಿಷ್ಯವನ್ನು ರೂಪಿಸುವ ಮಾರ್ಗ. ವಿದ್ಯಾರ್ಜನೆ ಸಮಯದಲ್ಲಿ ವಿದ್ಯಾರ್ಥಿಗಳು ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳಬೇಕು. ಸತತ ಪರಿಶ್ರಮದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ರವೀಂದ್ರ ಹೇಳಿದರು.
ಕೊಡಗಿನಲ್ಲಿ ಐಎಎಸ್ ಹಾಗೂ ಐಪಿಎಸ್ ಪರೀಕ್ಷೆ ತೆಗೆದುಕೊಳ್ಳುವವರ ಸಂಖ್ಯೆ ಕಡಿಮೆ. ಈ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ದೊರೆತರೆ ತರಬೇತಿ ಕೇಂದ್ರ ಸ್ಥಾಪಿಸಬಹುದಾಗಿದೆ. ಇದರೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ಕೊಡಗು ಮುಂಚೂಣಿಯಲ್ಲಿದ್ದು, ಪ್ರತಿಭೆಗಳಿಗೆ ಇನ್ನಷ್ಟು ಸಹಕಾರ ನೀಡುವ ನಿಟ್ಟಿನಲ್ಲಿ ಒಕ್ಕಲಿಗರ ಸಂಘದಿಂದ ಕ್ರೀಡಾ ತರಬೇತಿ ಶಾಲೆ ತೆರೆಯಲು ಪ್ರಯತ್ನಿಸಲಾಗುವುದು ಎಂದರು.
ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ, ಜಿಪಂ ಮಾಜಿ ಸದಸ್ಯೆ ಲೋಕೇಶ್ವರಿ ಗೋಪಾಲ್, ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆ ಅಧ್ಯಕ್ಷೆ ಪೂರ್ಣಿಮಾ ಗೋಪಾಲ್, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಸುರೇಶ್ ಚಕ್ರವರ್ತಿ, ಕಾರ್ಯದರ್ಶಿ ಯೋಗೇಂದ್ರ, ಜಿ.ಪಂ. ಮಾಜಿ ಸದಸ್ಯ ಬಿ.ಜೆ. ದೀಪಕ್, ಉದ್ಯಮಿ ಅರುಣ್ ಕಾಳಪ್ಪ, ಯುವ ವೇದಿಕೆಯ ಕೆ.ಟಿ. ದಯಾನಂದ್ ಇದ್ದರು.