

ಮೈಸೂರು
ವಿದ್ಯಾರ್ಥಿಗಳು ಗುರಿ, ಪ್ರಯತ್ನ, ನಿರಂತರ ಕೆಲಸ, ಸತತ ಅಭ್ಯಾಸ ಗುಣ ಬೆಳೆಸಿಕೊಂಡರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂದು ಬೆಂಗಳೂರಿನ ಅಮರರಾಜ ಎಲೆಕ್ಟ್ರಾನಿಕ್ಸ್‌ನ ಮುಖ್ಯ ಹಣಕಾಸು ಅಧಿಕಾರಿ ಷಣ್ಮುಖ ರಾವ್‌ಗೊರು ಹೇಳಿದರು.
ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಅಂತರ ಕಾಲೇಜುಗಳ ಬಿಝ್ ಟೆಕ್ ಎಕ್ಸ್ಟ್ರಾ ವೆಗಾನ್ಝಾ; ವಿದ್ವತ್-2ಕೆ25 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಏನನ್ನಾದರೂ ಸಾಧಿಸಬೇಕಾದರೆ ಮೊದಲು ತಮ್ಮ ಗುರಿ ನಿರ್ಧಾರವಾಗಬೇಕು. ಅದಕ್ಕಾಗಿ ವಿದ್ಯಾರ್ಥಿಗಳು ಸತತ ಪ್ರಯತ್ನದಲ್ಲಿ ತೊಡಗಿರಬೇಕಾಗುತ್ತದೆ. ಅದು ಅವರ ಮುಂದಿನ ಭವಿಷ್ಯವನ್ನು ತೀರ್ಮಾನಿಸುತ್ತದೆ ಎಂದರು.
ನಿರಂತರ ಅಧ್ಯಯನವು ವಿದ್ಯಾರ್ಥಿಗಳ ಬೆಳವಣಿಗೆಗೆ ಕಾರಣವಾಗಲಿದೆ. ಸಂವಹನ ಕೌಶಲವನ್ನು ಬೆಳೆಸಿಕೊಳ್ಳಬೇಕು. ಸಂವಹನ ಕೌಶಲವೆಂದರೆ ಕೇವಲ ಮಾತನಾಡುವುದಲ್ಲ ನಮ್ಮ ಅಧ್ಯಯನ, ನಾವು ಹೇಗೆ ವಿವರಿಸಬೇಕು ಎಂಬ ಜ್ಞಾನ, ಇತರರಿಗೆ ಹೇಗೆ ಅರ್ಥ ಮಾಡಿಸಬೇಕು ಎಂಬುದು ಸಂವಹನ ಕೌಶಲವೇ ಆಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಮರೀಗೌಡ ಮಾತನಾಡಿ, ವಿದ್ವಂತ್‌ನಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನ ಬರುತ್ತದೆ. ಈ ಕಾರ್ಯಕ್ರಮವು ಮೊದಲು ಕಾಲೇಜು ಮಟ್ಟದಲ್ಲಿದ್ದು, ನಂತರ ವಿಶ್ವವಿದ್ಯಾಲಯ ಮಟ್ಟಕ್ಕೆ ಬೆಳೆದು ಈಗ ರಾಜ್ಯ ಮಟ್ಟಕ್ಕೆ ಬಂದು ನಿಂತಿದೆ. ಇಲ್ಲಿಯ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಹೊರತರಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಪಿ.ವಿಶ್ವನಾಥ್ ಮಾತನಾಡಿ, ಕೈಗಾರಿಕೆಗಳನ್ನು ಸ್ಥಾಪಿಸಿ ಯಶಸ್ವಿಯಾಗಲು ಹಣಕಾಸಿನ ಹೂಡಿಕೆ ಮತ್ತು ಅದರಿಂದ ಲಾಭವನ್ನು ಪಡೆಯುವುದು ಬಹಳ ಮುಖ್ಯ. ಅಧ್ಯಯನದ ಬಗ್ಗೆ ನಿಮಗೆ ಸದಾ ಆಸಕ್ತಿಯಿರಬೇಕು. ಇದು ನಿಮಗೆ ಹೊಸ ಅನುಭವ ತಂದುಕೊಡುತ್ತದೆ. ಮುಂದಿನ ಭವಿಷ್ಯಕ್ಕೆ ಪ್ರೇರಣೆಯಾಗುತ್ತದೆ ಎಂದರು.
ಸಂಸ್ಥೆಯ ಗೌರವ ಅಧ್ಯಕ್ಷ ಗುಂಡಪ್ಪಗೌಡ ಮಾತನಾಡಿದರು. ಕಾಲೇಜು ನಿರ್ವಹಣಾ ಮಂಡಳಿ ಅಧ್ಯಕ್ಷ ಟಿ.ನಾಗರಾಜು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸ್ಪರ್ಧಾರ್ಥಿ, ವಿದ್ವತ್ ಸಂಚಾಲಕಿ ಪ್ರೊ.ಎನ್.ಗೀತಾ, ಅಧ್ಯಾಪಕ ಸಂಯೋಜಕರಾದ ಪ್ರೊ.ಎಂ.ಟಿ.ಶ್ರುತಿ, ಪ್ರೊ.ವಿ.ಚಂದನ್ ಇನ್ನಿತರರಿದ್ದರು.