ಸತತ ಅಭ್ಯಾಸ, ಪರಿಶ್ರಮದಿಂದ ಸಾಧನೆ ಸಾಧ್ಯ

02 KRN-1
Published on

ಕೆ.ಆರ್.ನಗರ: ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಸತತ ಅಭ್ಯಾಸ ಮತ್ತು ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿದರೆ ಯಶಸ್ಸಿನ ಮೆಟ್ಟಿಲು ಹತ್ತಲು ಸಹಾಯವಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಸಲಹೆ ನೀಡಿದರು.

ಪಟ್ಟಣದ ಅಂಬಾಭವಾನಿ ಸಮುದಾಯ ಭವನದಲ್ಲಿ ಸೃಜನ ಲೇಖಕರು ಮತ್ತು ಕಲಾವಿದರ ಬಳಗದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕುಗಳ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂದಿನ ಆಧುನಿಕ ಯುಗದಲ್ಲಿ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಸಾಧನೆಗೆ ಅವಶ್ಯಕತೆ ಇರುವ ಎಲ್ಲ ಮೂಲಸೌಕರ್ಯಗಳು ಕೈಗೆ ಸಿಗುತ್ತಿವೆ. ಇದರ ಸದುಪಯೋಗಪಡಿಸಿಕೊಂಡು ಉನ್ನತ ವಿದ್ಯಾಭ್ಯಾಸ ಮಾಡಿ ಸಮಾಜದಲ್ಲಿ ಉತ್ತಮ ಸ್ಥಾನಮಾನಗಳನ್ನು ಪಡೆದು ಹೆತ್ತವರಿಗೆ ಮತ್ತು ದೇಶಕ್ಕೆ ಕೀರ್ತಿ ತನ್ನಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಈ ಕ್ಷೇತ್ರದ ಶಾಸಕನಾಗಿ ನಾನು ಕೂಡ ಶಿಕ್ಷಣ ಮತ್ತು ಆರೋಗ್ಯಕ್ಕೆ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವುದಾಗಿ ತಿಳಿಸಿದ ಡಿ.ರವಿಶಂಕರ್, ಸೃಜನ ಲೇಖಕರು ಮತ್ತು ಕಲಾವಿದರ ಬಳಗ ಪ್ರತಿವರ್ಷ 160ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ. ಪ್ರತಿಭಾ ಪುರಸ್ಕಾರ ಪಡೆಯುವ ವಿದ್ಯಾರ್ಥಿಗಳು ಮುಂದೆ ಉನ್ನತ ವ್ಯಾಸಂಗ ಮಾಡಿ ಉತ್ತಮ ಸ್ಥಾನ ಪಡೆದ ನಂತರ ಮುಂದಿನ ದಿನಗಳಲ್ಲಿ ಸೃಜನ ಬಳಗದ ರೀತಿ ನೀವೂ ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಮೈಸೂರು ವಿವಿಯ ಪ್ರೊ.ಡಿ.ಆನಂದ್ ಮಾತನಾಡಿ, ಪ್ರತಿಭಾ ಪುರಸ್ಕಾರವು ವಿದ್ಯಾರ್ಥಿಗಳಿಗೆ ಅಹಂಕಾರ ಬರಿಸದೆ ವಿನಯತೆಯ ಜತೆಗೆ ದೊಡ್ಡ ಗುರಿ ಸಾಧಿಸುವ ಶಕ್ತಿ ಬರಿಸಲಿ ಎಂದರು.

ಜಗತ್ತಿನ ಅತ್ಯಂತ ಶ್ರೀಮಂತ ರಾಷ್ಟ್ರವಾಗಿ ಭಾರತ ಗುರುತಿಸಿಕೊಳ್ಳಲು ಶೇ.60ರಷ್ಟು ಯುವಜನತೆ ಕಾರಣವಾಗಿದೆ. 20 ವರ್ಷಗಳಲ್ಲಿ ಯುವ ಜನತೆ ಸಮರ್ಥವಾಗಿ ಬೆಳೆದರೆ ಇಂಡಿಯ ಸೂಪರ್ ಪವರ್ ಆಫ್ ಗೋಲ್ಡ್ ಆಗಲಿದೆ. 2020ರಷ್ಟಕ್ಕೆ ಬಲಿಷ್ಠ ರಾಷ್ಟ್ರವಾಗಬೇಕೆಂಬುದು ಅಬ್ದುಲ್ ಕಲಾಂ ಅವರ ಕನಸಾಗಿತ್ತು. ಭಾರತ ನಿಜವಾಗಿಯೂ ವಿಶ್ವಗುರುವಾಗಲು ನಿಮ್ಮೆಲ್ಲರ ಕೊಡುಗೆ ಬೇಕೆಂದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಡಾ.ಡಿ.ನಟರಾಜ್ ಮಾತನಾಡಿ, ಅವರವರ ಜಾತಿಯವರು ಅವರ ಜಾತಿಯ ವಿದ್ಯಾರ್ಥಿಗಳಿಗೆ ಸನ್ಮಾನಿಸುತ್ತಾರೆ. ಆದರೆ ಇಲ್ಲಿ ಎಲ್ಲ ಧರ್ಮ, ಜಾತಿ ಜನಾಂಗದ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸುತ್ತಿರುವುದು ಅಪರೂಪ. ಅಂಕಪಟ್ಟಿಯೊಂದಿಗೆ ಜ್ಞಾನವೂ ಮುಖ್ಯ. ಆದ್ದರಿಂದ ಪುಸ್ತಕಗಳನ್ನು, ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ಜ್ಞಾನ ಹೆಚ್ಚಿಸಿಕೊಳ್ಳಿ ಎಂದು ತಿಳಿಸಿದರು.

ಮೆಗ್ನಟಾಸ್ ಸೆಕ್ಯೂರಿಟಿ ಏಜೆನ್ಸಿ ಸಂಸ್ಥೆಯ ಮಾಲೀಕ ಕೆ.ಎ.ಮಹೇಶ್, ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಸೃಜನ ಲೇಖಕರು ಮತ್ತು ಕಲಾವಿದರ ಬಳಗದ ಅಧ್ಯಕ್ಷ ರಾ.ಸುರೇಶ್, ಪಿ.ಎಸ್.ಎಂಟರ್‌ಪ್ರೈಸೆಸ್ ಮಾಲೀಕ ಮಹೇಶ್‌ಕುಮಾರ್, ರೈತ ಪರ್ವ ಸಂಘಟನೆ ರಾಜ್ಯ ಉಪಾಧ್ಯಕ್ಷ ಜೆ.ಎಂ.ಕುಮಾರ್, ಕಾಂಗ್ರೆಸ್ ಮುಖಂಡ ಸಾಲಿಗ್ರಾಮ ಎಸ್.ಪಿ.ತಮ್ಮಯ್ಯ ಇನ್ನಿತರರು ಮಾತನಾಡಿದರು.

ಉಪನ್ಯಾಸಕ ಡಿ.ಶ್ರೀನಿವಾಸ್, ಎಂ.ಎಸ್.ಬೋನ್ ಸೆಂಟರ್‌ನ ಮೂಳೆ ತಜ್ಞ ಹಕ್ಕಿಮ್ ನದೀಮ್, ಗೀತಾ ಜಯಕುಮಾರ್, ಕಂಠೇನಹಳ್ಳಿ ಚೈತ್ರಾ, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಉಮೇಶ್, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಭೀಮರಾವ್ ಸಾಠೆ, ನಗರ ಕಾಂಗ್ರೇಸ್ ಅಧ್ಯಕ್ಷ ಎಂ.ಜೆ.ರಮೇಶ್, ಯುವ ರೈತ ಘಟಕದ ಅಧ್ಯಕ್ಷ ರಾಮಪ್ರಸಾದ್, ಮುಖಂಡ ಇಸ್ಮಾಯಿಲ್ ಕನ್ಹೋಲಿ, ಸಾಮರಸ್ಯ ಪತ್ತಿನ ಸಹಕಾರ ಸಂಘದ ನಿರ್ದೇಶಕ ಡಿ.ಕೆ.ಕೃಷ್ಣನಾಯಕ್, ಶಿವಮ್ಮ, ವಿದ್ಯಾರ್ಥಿಗಳು ಮತ್ತು ಪಾಲಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net