

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಬೇಕಾದರೆ ಸತತ ಅಭ್ಯಾಸ, ಪ್ರಯತ್ನದಿಂದ ಮಾತ್ರ ಸಾಧ್ಯ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ. ಶುಭ ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರ (ಬೆಂಗಳೂರು) ಹಾಗೂ ಐಸಿಎಸ್ ಸ್ಪರ್ಧಾತ್ಮಕ ತರಬೇತಿ ಸಂಸ್ಥೆ ಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಜ್ಞಾನಾಮೃತ-ಉಚಿತ ತರಬೇತಿ ಉದ್ಘಾಟನೆ ಮತ್ತು ಸ್ಪರ್ಧಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಐಸಿಎಸ್ ಮಹೇಶ ಪಿಯು ಕಾಲೇಜ್ ಪ್ರಾಚಾರ್ಯ ಬಿ.ಸಿ. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸದೇ ಪೂರ್ಣ ಅಧ್ಯಯನದತ್ತ ಗಮನ ಕೇಂದ್ರೀಕರಿಸಿದಾಗ ಮಾತ್ರ ಯಶಸ್ಸು ಸಾಧ್ಯ ಎಂದು ತಿಳಿಸಿಕೊಟ್ಟರು.
ಸಂಸ್ಥೆಯ ಆಡಳಿತಾಧಿಕಾರಿ ಹನಮಂತ ಶಿರಗೋಜಿ ಮಾತನಾಡಿ, ಕಳೆದ 22 ವರ್ಷಗಳಿಂದ ಐಸಿಎಸ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸಂಸ್ಥೆಯು ಉತ್ತಮ ಗುಣಮಟ್ಟದ ತರಬೇತಿ ನೀಡುತ್ತಿದೆ. ಸಾಧನೆ ಎನ್ನುವುದು ಸ್ವಯಂ ನಂಬಿಕೆ ಮೇಲೆ ನಿಂತಿದೆ. ಇಚ್ಛಾಶಕ್ತಿ, ಕಾರ್ಯ ತತ್ಪರತೆಗಳು ಯಶಸ್ಸಿನ ಸೂತ್ರಗಳು ಎಂದರು.
ಕನ್ನಡ ಉಪನ್ಯಾಸಕ ಶರಣಪ್ಪಗೌಡ ಚಿಕ್ಕನಗೌಡ್ರ ಮಾತನಾಡಿದರು. ಐಸಿಎಸ್ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಧ್ಯಯನ ಸಾಮಗ್ರಿಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ನಯನಾ ಸ್ವಾಗತಿಸಿದರು. ವಿರುಪಾಕ್ಷ ಶಾಮನೂರ ನಿರೂಪಿಸಿದರು. ಸೌಭಾಗ್ಯ ವಂದಿಸಿದರು. ಶೀತಲ ಪದ್ಮೋಜಿ, ಈಶ್ವರ ಎಸ್.ಒ., ಧರೇಶ ದುಂಡಿ, ಇತರರು ಇದ್ದರು.