

ಸೈದಾಪುರ: ಶಿಕ್ಷಕರ ವೃತ್ತಿ ಅಂತ್ಯAತ ಶ್ರೇಷ್ಠವಾಗಿದ್ದು, ಸಮಾಜದಲ್ಲಿ ನಿಮ್ಮನ್ನು ಗೌರವದಿಂದ ಕಾಣುತ್ತಾರೆ. ಈ ಸಾಧನೆಗೆ ಸತತ ಅಧ್ಯಯನ ಮತ್ತು ಸಮಯಕ್ಕೆ ಮಹತ್ವದ ನೀಡಿದಾಗ ಮಾತ್ರ ಆದರ್ಶ ಶಿಕ್ಷಕರಾಗಲು ಸಾಧ್ಯ ಎಂದು ವಿದ್ಯಾವರ್ಧಕ ಸಂಸ್ಥೆ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಹೇಳಿದರು.
ಪಟ್ಟಣದ ವಿದ್ಯಾವರ್ಧಕ ಡಿಎಲ್‌ಎಡ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಹಮ್ಮಿಕೊಂಡ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಏಕಾಗ್ರತೆ, ಆಸಕ್ತಿಯೊಂದಿಗೆ ಪ್ರಯತ್ನ ಮಾಡಬೇಕು. ಬದಲಾದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಯಶಸ್ಸು ನಮ್ಮದಾಗಲು ಸ್ಪರ್ದಾತ್ಮಕ ಮನೋಭಾನೆ ಕಂಡುಕೊಳ್ಳಬೇಕು. ಇದಕ್ಕೆ ಉಪನ್ಯಾಸಕರ ಮಾರ್ಗದರ್ಶನ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಕರಬಸಯ್ಯ ದಂಡಿಗಿಮಠ, ಇತ್ತಿಚಿಗೆ ಡಿಎಲ್‌ಎಡ್ ಕಾಲೇಜುಗಳ ಮಹತ್ವ ಹೆಚ್ಚಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ೧ರಿಂದ ೫ನೇ ತರಗತಿ ಶಿಕ್ಷಕರ ಕೊರತೆ ಇದ್ದು, ಇಗಾಗಲೇ ಭರ್ತಿ ಮಾಡಲು ಸರ್ಕಾರ ಮುಂದಾಗಿದೆ. ಇದಕ್ಕೆ ಅರ್ಹತೆ ಮುಖ್ಯವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾತಿ ಪಡೆಯುತ್ತಿರುವುದು ಉತ್ತಮ ಬೆಳಣಿಗೆಯಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅತಿ ಕಡಿಮೆ ವೆಚ್ಚದಲ್ಲಿ ವೃತ್ತಿ ಶಿಕ್ಷಣ ಪಡೆಯುವ ಅವಕಾಶ ಈ ಕೋರ್ಸ್ನಲ್ಲಿದೆ ಎಂದು ಹೇಳಿದರು.
ಸಂಸ್ಥೆ ಸಹ ಕಾರ್ಯದರ್ಶಿ ಕೆ.ಬಿ.ಗೋವರ್ಧನ, ಕೋಶಾಧ್ಯಕ್ಷ ಮುಕುಂದಕುಮಾರ ಅಲಿಝಾರ, ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಹಂಪಣ್ಣ ಸಜ್ಜನಶೆಟ್ಟಿ, ಗೂಳಪ್ಪ.ಎಸ್.ಮಲ್ಹಾರ, ಉಪನ್ಯಾಸಕರಾದ ಹಣಮರೆಡ್ಡಿ ಮೋಟ್ನಳ್ಳಿ, ಶ್ವೇತಾ ರಾಘವೇಂದ್ರ ಪೂರಿ, ಆನಂದ ಪಾಟೀಲ್ ಕೊಂಡಾಪುರ, ಮೀನಾಕ್ಷಿ, ಅನುರಾಧ, ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಸೇರಿದಂತೆ ಇತರರಿದ್ದರು.
ಪ್ರಶಿಕ್ಷಣಾರ್ಥಿ ಕಾವೇರಿ, ಸಿದ್ದಲಿಂಗಮ್ಮ ಪ್ರಾರ್ಥಿಸಿದರು, ಪೋಲಮ್ಮ ಸ್ವಾಗತಿಸಿದರು, ವಿರೇಶ ನಿರೂಪಿಸಿದನು. ಮಮತಾ ವಂದಿಸಿದರು.