ಸಣ್ಣ, ಮಧ್ಯಮ ಉದ್ಯಮಗಳ ನಾಶದಿಂದ ನಿರುದ್ಯೋಗ ಸೃಷ್ಟಿ: ಚಿಂತಕ ಶಿವಸುಂದರ್

shivasudara
Published on

ಮೈಸೂರು: ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡುತ್ತಿದ್ದ 75 ಸಾವಿರ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಉದ್ದಿಮೆಗಳ ನಾಶವಾಗಿದೆ ಎಂದು ಸಾಮಾಜಿಕ ಚಿಂತಕ ಶಿವಸುಂದರ್ ಕಳವಳ ವ್ಯಕ್ತಪಡಿಸಿದರು.

ಅಂಗಳ ಸಾಹಿತ್ಯ ಬಳಗ, ದೇವರತ್ನ ಫೌಂಡೇಷನ್ ಸಹಯೋಗದಲ್ಲಿ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ವಿದ್ಯಾರ್ಥಿ-ಯುವಜನರ ಸಮಸ್ಯೆ-ಸವಾಲು-ಪರಿಹಾರ’ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಎಂಎಸ್‌ಎಂಇ ಹೆಚ್ಚು ಉದ್ಯೋಗವನ್ನು ಕೊಡುತ್ತದೆ. ಇದನ್ನು ಹೆಚ್ಚು ಉನ್ನತೀಕರಣ ಮಾಡಬೇಕು. ಆದರೆ, ಸ್ಥಳೀಯ ಉದ್ಯಮವೇ ನಾಶದತ್ತ ಮುಖ ಮಾಡಿದೆ. ಆದರೆ, ಬೃಹತ್ ಉದ್ಯಮಗಳು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡುವುದಿಲ್ಲ. ಎಲ್ಲ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ, ಯಾತ್ರೀಕರಣದಿಂದ ಉದ್ಯೋಗಕ್ಕೆ ಕತ್ತರಿ ಬಿದ್ದಿದೆ ಎಂದರು.

ಭಾರತದ 298 ಅತೀ ಶ್ರೀಮಂತ ಜನರ ಬಳಿ 98 ಲಕ್ಷ ಕೋಟಿ ರೂ. ಆಸ್ತಿ ಹೊಂದಿದ್ದಾರೆ. 80 ಕೋಟಿ ಇರುವ ರೈತಾಪಿ ವರ್ಗ ಕಡಿಮೆ ಆಸ್ತಿ ಹೊಂದಿದೆ. ಕೃಷಿಕರ ಸರಾಸರಿ ಆದಾಯ ಕರ್ನಾಟಕದಲ್ಲಿ ಒಂದು ಲಕ್ಷ ರೂ., ಪಂಜಾಬ್‌ನಲ್ಲಿ ಎರಡೂವರೆ ಲಕ್ಷ ರೂ., ಬಿಹಾರದಲ್ಲಿ 25 ಸಾವಿರ ರೂ. ಸಾವಿರ ಇದೆ. ಇದು ಆರ್ಥಿಕ ಸಮಾನತೆ ಕಾರಣವಾಗುತ್ತಿದೆ ಎಂದು ವಿಶ್ಲೇಷಿಸಿದರು

ಸದನದಲ್ಲಿ ಜನರ ಸಮಸ್ಯೆಗಳನ್ನು ಚರ್ಚೆಗಳು ನಡೆಯುತ್ತಿಲ್ಲ. ಹನಿಟ್ರಾೃಪ್ ಬಗ್ಗೆ ಚೆರ್ಚೆಗಳು ನಡೆಯುತ್ತಿದೆ. ದೇಶದಲ್ಲಿ ಸಂವಿಧಾನದ ವಿರುದ್ಧವಾಗಿ ಆರ್ಥಿಕ ನೀತಿಗಳು ಇವೆ. ಸಂಪತ್ತನ್ನು ಸಾಮೂಹಿಕವಾಗಿ ಹಂಚಿಕೆ ಆಗಬೇಕು.

ಸಮಾನ ಕೆಲಸಕ್ಕೆ ಸಮಾನ ವೇತನ, ಪ್ರತಿಯೊಬ್ಬನಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕೊಡಬೇಕು ಎಂದು ಸಂವಿಧಾನದಲ್ಲಿ ಇದೆ. ಆದರೆ, ಏಕೆ ಕೊಡಲಿಲ್ಲ, ಇದು ನಮ್ಮ ಮುಂದೆ ಇರುವ ಪ್ರಮುಖ ಸಮಸ್ಯೆಗಳು ಎಂದು ಹೇಳಿದರು.

ನಮಗೆ ಉದ್ಯೋಗ ಕೊಡಿ ಎಂದರೆ ದೇವಸ್ಥಾನ ನಿರ್ಮಾಣ ಮಾಡಿ ಜಾಗಟೆ ಕೊಡ್ತಾರೆ. ಹೀಗಾದರೆ, ನಿರುದ್ಯೋಗ ಸಮಸ್ಯೆ ಬಗೆಹರಿಯಲ್ಲ. ಲೋಕದ ಸಮಸ್ಯೆಗಳನ್ನು ಗೂಗಲ್‌ನಲ್ಲಿ ಹುಡುಕಬಾರದು. ಸಮಾಜದಲ್ಲಿ ಹುಡುಕಬೇಕು ಎಂದರು.

ಸ್ವಾತಂತ್ರೃ, ಸಮಾನತೆ, ಬಂಧುತ್ವ ಒಟ್ಟಿಗೆ ಇರಬೇಕು. ವ್ಯಕ್ತಿ ಸ್ವಾತಂತ್ರ್ಯ ಇದೆ. ಆದರೆ, ಆರ್ಥಿಕ ಸಮಾನತೆ ಇಲ್ಲ. ಆದ್ದರಿಂದ ಆರ್ಥಿಕ ಸಮಾನತೆ ಮೂಲಭೂತ ಹಕ್ಕಾಗಬೇಕು. ಮುಖ್ಯವಾಗಿ ಸಂಪತ್ತಿನ ರಾಷ್ಟ್ರೀಕರಣ ಆಗಬೇಕು. ಇದರಲ್ಲಿ ಬಹಳ ಮುಖ್ಯವಾಗಿ ಭೂಮಿ. ಜತೆಗೆ, ಬ್ರಾಹ್ಮಣ, ದಲಿತರು ಒಟ್ಟಾಗಿ ದುಡಿಯಬೇಕು. ಶತಮಾನಗಳಿಂದಲೂ ನಮ್ಮಲ್ಲಿ ಶ್ರಮ ಹಂಚಿಕೊಳ್ಳುವ ವ್ಯವಸ್ಥೆ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಇಂಟರ್ನ್ಯಾಷನಲ್ ಸ್ಕೂಲ್ ಐಷಾರಾಮಿ ಹೋಟೆಲ್‌ನಂತಿವೆ. ಪ್ರತಿ ತಿಂಗಳು ಒಂದು ಲಕ್ಷ ರೂ. ಶುಲ್ಕ ಇದೆ. ಇದು ನಮ್ಮ ರೈತರ ವಾರ್ಷಿಕ ವರಮಾನವಾಗಿದೆ. ಒಂದೇ ಒಂದು ಕೃಷಿ ವಿಶ್ವವಿದ್ಯಾಲಯ ಮಳೆ ಆಶ್ರಯ ಪ್ರದೇಶದಲ್ಲಿ ಹೇಗೆ ಆರ್ಥಿಕ ನೀತಿಯನ್ನು ಸ್ಥಾಪಿಸಬಹುದು ಎಂದು ಅಧ್ಯಯನ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು

1991ರ ನಂತರ ಮನಮೋಹನ್‌ಸಿಂಗ್ ನೇತೃತ್ವದಲ್ಲಿ ಜಾರಿಗೆ ತಂದ ನವ ಉದಾರೀಕರಣ ನೀತಿಯು ಶ್ರೀಮಂತ ಕಾರ್ಪೋರೇಟ್ ವ್ಯಕ್ತಿಗಳು ದೇಶವನ್ನು ಆರ್ಥಿಕವಾಗಿ ಮುನ್ನಡೆಸಲು ವೇದಿಕೆ ಕಲ್ಪಿಸಿಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಳ ಮೀಸಲಾತಿ ತೀರ್ಮಾನದ ಬಳಿಕ ಸರ್ಕಾರ ಎಲ್ಲ ಇಲಾಖೆಯಲ್ಲಿರುವ ಬ್ಲಾಕ್‌ಲಾಗ್ ಹುದ್ದೆಗಳನ್ನು ತುಂಬಬೇಕು. ಕಾರ್ಮಿಕ ನೀತಿ ಸಂಪೂರ್ಣ ಬದಲಾಗಬೇಕು. ಕೃಷಿಯಲ್ಲಿ ಕನಿಷ್ಠ ಆದಾಯಕ್ಕಾಗಿ ಎಂಎಸ್‌ಪಿ ಜಾರಿ ಆಗಬೇಕು.

ಸರ್ಕಾರದ ಒಡೆತನದಲ್ಲಿ 11 ಲಕ್ಷ ಎಕರೆ ಜಮೀನು ಇದೆ. 16 ಲಕ್ಷ ಜನರು ಕೃಷಿ ಮಾಡಲು ಜಮೀನು ಕೊಡಿ ಎಂದು ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಜಮೀನು ಕೊಡಿ. ಮೈಸೂರು ಇನ್ಫೋಸಿಸ್ ಮೂರು ಸಾವಿರ ಜಮೀನನ್ನು ಯಾವುದಕ್ಕೂ ಬಳಸಿಲ್ಲ. ಅದನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಸ್ವಯಂ ಉದ್ಯೋಗದಿಂದಲೇ ನಿರುದೋಗ್ಯ ಸಮಸ್ಯೆ ನಿವಾರಣೆ ಸಾಧ್ಯ. ಆದ್ದರಿಂದ ಯುವ ಜನರು ಉದ್ಯೋಗಿ ಆಗುವುದಕ್ಕಿಂತ ಉದ್ಯೋಗದಾತರಾಗಬೇಕು ಎಂದು ಹೇಳಿದರು.

ಉನ್ನತ ಶಿಕ್ಷಣ ಕೈಗಾರಿಕಾ ಕ್ಷೇತ್ರಕ್ಕೆ ಪೂರಕವಾಗಿ ರೂಪಗೊಳ್ಳಬೇಕು. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಮೊದಲ ಆದ್ಯತೆ ನೀಡಬೇಕು. ಇದರಿಂದ ಸ್ಥಳೀಯ ಆರ್ಥಿಕ ಚಟುವಟಿಕೆಗಳು ವೃದ್ಧಿಗೆ ಸಾಧ್ಯವಾಗಲಿದೆ. ಬೆಂಗಳೂರಿನಂತಹ ಮಹಾನಗರಗಳಿಗೆ ವಲಸೆ ಹೋಗಿರುವ ಹಳ್ಳಿಯ ಯುವಕರನ್ನು ಮರಳಿ ಹಳ್ಳಿಕಡೆಗೆ ಕರೆತರಲು ಅನುಕೂಲವಾಗಲಿದೆ ಎಂದರು.

ಐಟಿ-ಬಿಟಿಯಿಂದ ದೊಡ್ಡ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಸಾಧ್ಯವಿಲ್ಲ. ಅದು ಸಾಧ್ಯವಾಗುವುದು ಸಣ್ಣ ಕೈಗಾರಿಕೆಗಳಿಂದ ಮಾತ್ರ. ನವೋದ್ಯಮ ಎಂದರೆ ಬರೀ ಐಟಿ-ಬಿಟಿಯಷ್ಟೇ ಅಲ್ಲ, ಗ್ರಾಮಾಂತರ ಪ್ರದೇಶದಲ್ಲಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುವುದೂ ಸ್ಟಾರ್ಟ್‌ಅಪ್. ರಿಸ್ಕ್ ತೆಗೆದುಕೊಳ್ಳುವ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಯುವ ಜನರು ಹೊಸ ಪ್ರಯತ್ನಕ್ಕೆ ಮುಂದಾಗಬೇಕು ಎಂದರು.

ಸರ್ಕಾರ ಉದ್ಯೋಗ ನೀತಿ ಸಹ ಬದಲಾಗಬೇಕು. ಇದು ಕೆಳಮಟ್ಟದಿಂದ ಮೇಲ್ಮಟ್ಟದವರೆಗಿನ ವ್ಯವಸ್ಥೆಯಲ್ಲೂ ಪರಿವರ್ತನೆಯಾಗಬೇಕು ಎಂದರು.

ಎರಡು ನಿಮಿಷದ ‘ಎರಡ್ರೂಪಾಯ್’ ಕಿರುಚಿತ್ರ ಪ್ರದರ್ಶಿಸಲಾಯಿತು. ಅಂಗಳ ಸಾಹಿತ್ಯ ಬಳಗದ ವರಹಳ್ಳಿ ಆನಂದ, ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ, ವಕೀಲ ಎಂ.ಶಿವಪ್ರಸಾದ್, ನೃಪತುಂಗ ಶಾಲೆಯ ಸವಿತಾ ಪ.ಮಲ್ಲೇಶ್, ಸಮಾಜ ಸೇವಕ ಅಹಿಂದ ಜವರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net