

ನುಗ್ಗೇಹಳ್ಳಿ: ಹೋಬಳಿಯ ಇತಿಹಾಸ ಪ್ರಸಿದ್ಧ ಅಮರಗಿರಿ ಚಿಕ್ಕೋನಹಳ್ಳಿಯಲ್ಲಿ ಶ್ರೀರಂಗನಾಥ ಸ್ವಾಮಿ ರಥೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಬೆಟ್ಟದಲ್ಲಿರುವ ಮೂಲ ದೇವರಿಗೆ ಅಭಿಷೇಕ, ಬೆಳ್ಳಿ ವಜ್ರಾಂಗಿ ಧಾರಣೆ ಅಲಂಕಾರ ಮಹಾ ಮಂಗಳಾರತಿ ನಡೆಯಿತು. ಸೂರ್ಯ ಮಂಡಲೋತ್ಸವ, ಕೃಷ್ಣಗಂದುತ್ಸವ ನಡೆಯಿತು. ಉತ್ಸವ ರಥ ಬೀದಿಗಳಲ್ಲಿ ಸಾಗಿದ ನಂತರ ದೇವರನ್ನು ಹೂವಿನ ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿ ಮಧ್ಯಾಹ್ನ 1.30ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ರಥಕ್ಕೆ ಹಣ್ಣು ದವನ ಎಸೆದರು. ಭಕ್ತರಿಗೆ ಪಾನಕ ಫಲಹಾರ ವಿತರಿಸಲಾಯಿತು. ನಂತರ ಅನ್ನದಾಸೋಹ ನಡೆಯಿತು.
ನುಗ್ಗೇಹಳ್ಳಿ ಮಠದ ಶ್ರೀ ಮಹೇಶ್ವರ ಸ್ವಾಮೀಜಿ, ತಾಲೂಕು ಅರ್ಚಕರ ಸಂಘದ ಅಧ್ಯಕ್ಷ ವಿ.ಎನ್.ಶ್ರೀಧರ್ ಸ್ವಾಮೀಜಿ, ಪ್ರಧಾನ ಅರ್ಚಕ ಸಿ.ವೈ.ಶ್ರೀಕಾಂತ್, ಸೇವಾ ಸಮಿತಿ ಅಧ್ಯಕ್ಷೆ ರೂಪಾ ಸುರೇಶ್, ಸಂಪತ್ತು, ಗುರು, ಮಹಾಲಿಂಗಪ್ಪ, ಧರ್ಮರಾಜ್ ಇತರರು ಹಾಜರಿದ್ದರು.