ದಾವಣಗೆರೆ: ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ದಸರಾ ಶೋಭಾಯಾತ್ರೆ ಸಾಂಗವಾಗಿ ನೆರವೇರಿತು. ಬಿಸಿಲಿನ ನಡುವೆಯೂ ಸಾವಿರಾರು ಸಂಖ್ಯೆಯ ಜನರು ಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ಬೇತೂರು ರಸ್ತೆ ವೆಂಕಟೇಶ್ವರ ವೃತ್ತದಲ್ಲಿ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವುದರೊಂದಿಗೆ ವಿನೋಬನಗರದ ಜಡೇಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಚಾಲನೆ ನೀಡಿದರು.
ಮೆರವಣಿಗೆ ಮಾರ್ಗದಲ್ಲಿ ಸ್ವಾಗತ ಕೋರುವ ಕಮಾನುಗಳು, ಫ್ಲೆಕ್ಸ್‌ಗಳು ರಾರಾಜಿಸಿದರೆ, ಪ್ರಮುಖ ವೃತ್ತಗಳೆಲ್ಲ ಕೇಸರಿ ಬಂಟಿಂಗ್ಸ್‌ಗಳಿಂದ ಅಲಂಕೃತಗೊಂಡಿದ್ದವು. ಕೆಲವು ಮನೆ, ಕಟ್ಟಡಗಳ ಮೇಲೆ ಭಗವಾಧ್ವಜ ಹಾರಾಡಿದವು.
ಶೋಭಾಯಾತ್ರೆಯಲ್ಲಿ ಡಿಜೆ ಸದ್ದು ಮಾಡಿತು. ಹಾಡುಗಳಿಗೆ ಯುವಕರು ಹೆಜ್ಜೆ ಹಾಕಿದರು. ಬಹುತೇಕರ ಕೊರಳಲ್ಲಿ ಕೇಸರಿ ಶಲ್ಯ ಕಂಡುಬಂದಿತು. ಕೆಲವರು ಕೈಯಲ್ಲಿದ್ದ ಬೃಹದಾಕಾರದ ಭಗವಾಧ್ವಜದ ಕೋಲನ್ನು ತಿರುಗಿಸಿ ಗಮನ ಸೆಳೆದರು.
ಹಾಸಭಾವಿ ವೃತ್ತದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಬಂಬೂಬಜಾರ್, ಗಣೇಶ ದೇವಸ್ಥಾನ ರಸ್ತೆ ಮೂಲಕ ಈ ವೃತ್ತ ತಲುಪಿದಾಗ ಕೆಲ ಹೊತ್ತು ಡಿಜೆ ಹಾಡುಗಳು ಮೇಳೈಸಿದವು. ಅಲ್ಲದೆ ಜೈ ಶ್ರೀರಾಮ್, ನಾವೆಲ್ಲ ಹಿಂದು ನಾವೆಲ್ಲ ಒಂದು, ಭಾರತ್ ಮಾತಾ ಕಿ ಜೈ, ಹಿಂದುಸ್ತಾನ್‌ದನಲ್ಲಿ ಇರಬೇಕಾದ್ರೆ ಹಿಂದು ಹೇಳ್ದಂಗೆ ಕೇಳ್ಲೇಬೇಕು ಇತ್ಯಾದಿ ಘೋಷಣೆಗಳು ಮೊಳಗಿದವು.
ಹೀಗಾಗಿ ಕೆಲಕಾಲ ಅಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಮುಖಂಡರನ್ನು ಮುಂದಕ್ಕೆ ತಳ್ಳುತ್ತಿದ್ದ ಪೊಲೀಸರು ಡಿಜೆ ವಾಹನವನ್ನು ಮುಂದೆ ದಾಟಿಸಲು ಹರಸಾಹಸ ಪಡಬೇಕಾಯಿತು. ಎರಡು ಡ್ರೋಣ್‌ಗಳು ಕೂಡ ಶೋಭಾಯಾತ್ರೆ ಸೆರೆಹಿಡಿಯಲು ಸ್ಪರ್ಧೆಯೊಡ್ಡಿದಂತೆ ಕಂಡವು.
ಚೌಕಿಪೇಟೆ, ಕಾಳಿಕಾದೇವಿ ರಸ್ತೆ, ವೀರಮದಕರಿನಾಯಕ ವೃತ್ತ ಇನ್ನಿತರೆ ರಸ್ತೆ ಮೂಲಕ ಯಾತ್ರೆ ಬೀರಲಿಂಗೇಶ್ವರ ಮೈದಾನ ತಲುಪಿತು. ಯಾತ್ರೆ ಮಾರ್ಗದಲ್ಲಿ ಜನರು ಮನೆ, ಕಟ್ಟಡದ ಮೇಲೆ ನಿಂತು ನೋಡುತ್ತಿದ್ದರು. ಮೇಲಿಂದಲೇ ಪುಷ್ಪವೃಷ್ಠಿ ಮಾಡಲಾಗುತ್ತಿತ್ತು. ಮಾರ್ಗದುದ್ದಕ್ಕೂ ಭಕ್ತರಿಂದ ಮಜ್ಜಿಗೆ, ತಂಪು ಪಾನೀಯ ವ್ಯವಸ್ಥೆ ಮಾಡಲಾಗಿತ್ತು.
ಚಂಡೆಮದ್ದಳೆ ನಿನಾದ ಕಿವಿಗೆ ಇಂಪು ನೀಡಿದರೆ, ನಂದಿಕೋಲು, ನಗೆಬೊಂಬೆಗಳು, ಕೀಲುಕುದುರೆ, ವೀರಗಾಸೆ, ನಾಸಿಕ್ ಡೋಲುಗಳು ಉತ್ಸಾಹ ಹೆಚ್ಚಿಸಿದ್ದವು. ಅಲ್ಲಲ್ಲಿ ಯುವಕರು ಮೊಬೈಲ್ ಸೆಲ್ಪಿ, ವೀಡಿಯೋ ಚಿತ್ರೀಕರಣ ಮಾಡುತ್ತಿದ್ದರು.
ಕನ್ಯಕಾ ಪರಮೇಶ್ವರಿ ದೇವಿ ಮೂರ್ತಿ ಹೊತ್ತ ಸಾರೋಟು ಯಾತ್ರೆಯ ಮುಂಚೂಣಿಯಲ್ಲಿದ್ದರೆ ಹಿಂಬದಿಯಲ್ಲಿ ಅಶ್ವಾರೂಢ ಛತ್ರಪತಿ ಶಿವಾಜಿ ಪ್ರತಿಮೆಯಿದ್ದ ವಾಹನವಿತ್ತು. ಕರ್ನಾಟಕದ ಪ್ರಮುಖ ಸ್ವಾಮೀಜಿಗಳು, ದಾರ್ಶನಿಕರು, ಕವಿಗಳು, ಹುತಾತ್ಮ ಯೋಧರು, ಏಷ್ಯನ್ ಗೇಮ್‌ನಲ್ಲಿ ಪದಕ ಪಡೆದ ಭಾರತೀಯ ಕ್ರೀಡಾಪಟುಗಳು, ನಾಡು-ನುಡಿಗೆ ಶ್ರಮಿಸಿದ ಗಣ್ಯರು, ಪ್ರಮುಖ ದೇಗುಲಗಳು, ಐತಿಹಾಸಿಕ ತಾಣಗಳು, ದಾವಣಗೆರೆಯ ದಾನಿಗಳು ಮೊದಲಾದ ಚಿತ್ರಪಟಗಳನ್ನು ಹೊತ್ತ ವಾಹನಗಳು ಸಾಗಿದವು.
ಯಾತ್ರೆಯಲ್ಲಿ ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ್, ಎಂ.ಪಿ.ರೇಣುಕಾಚಾರ್ಯ, ಮೇಯರ್ ಬಿ.ಎಚ್.ವಿನಾಯಕ, ಮೇಲ್ಮನೆ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಮಾಜಿ ಮೇಯರ್ ಎಸ್.ಟಿ.ವೀರೇಶ್, ಬಿ.ಜಿ.ಅಜಯಕುಮಾರ್, ರಾಜನಹಳ್ಳಿ ಶಿವಕುಮಾರ್, ಲೋಕಿಕೆರೆ ನಾಗರಾಜ್, ವಿನಾಯಕ ರಾನಡೆ, ವೈ.ಮಲ್ಲೇಶ್, ಸತೀಶ್ ಪೂಜಾರಿ, ಎನ್.ರಾಜಶೇಖರ್, ಧನಂಜಯ ಕಡ್ಲೇಬಾಳ್, ಸೋಗಿ ಶಾಂತಕುಮಾರ್, ಕೆ.ಪ್ರಸನ್ನಕುಮಾರ್, ಪಿ.ಸಿ.ಶ್ರೀನಿವಾಸ್, ಕೆ.ಆರ್.ಮಲ್ಲಿಕಾರ್ಜುನ, ಬಸವರಾಜ ಗುಬ್ಬಿ, ಪರಶುರಾಂ ನಡುಮನಿ, ಬೇಕರಿ ರಾಜು, ಗುರು ಜೊಳ್ಳಿ, ಗೌತಮ್ ಜೈನ್, ಡಿ.ಕೆ.ಕುಮಾರ್ ಇತರರಿದ್ದರು.
ಎಸ್ಪಿ ಪರಿವೀಕ್ಷಣೆ
ಶೋಭಾಯಾತ್ರೆಯ ಸೂಕ್ಷ್ಮ ಪ್ರದೇಶಗಳಲ್ಲಿ ಎಸ್ಪಿ ಉಮಾ ಪ್ರಶಾಂತ್ ಭಾಗಿಯಾಗಿದ್ದರು. ಮೆರವಣಿಗೆ ಮಾರ್ಗದಲ್ಲಿ ಪೊಳೀಸರಿಗೆ ಸೂಚನೆ ನೀಡಿದರು. 3 ಕೆಎಸ್‌ಆರ್‌ಪಿ, 5 ಡಿಎಆರ್ ತುಕಡಿ, ನಾಲ್ವರು ಡಿವೈಎಸ್ಪಿ, 13 ಪಿಸಿಐ, 34 ಪಿಸ್‌ಐ, 50 ಎಎಸ್‌ಐ, 600 ಪೇದೆ, 350 ಗೃಹರಕ್ಷಕರು ಸೇರಿ ಸುಮಾರು 1400 ಅಧಿಕಾರಿ-ಸಿಬ್ಬಂದಿ ಮೆರವಣಿಗೆಯ ಬಂದೋಬಸ್ತ್‌ನಲ್ಲಿ ಭಾಗವಹಿಸಿದ್ದರು.