ಸಡಗರ ಸಂಭ್ರಮದಿಂದ ಕ್ರಿಸ್‌ಮಸ್ ಆಚರಣೆ: ಕ್ರೈಸ್ತ ಬಾಂಧವರಿಂದ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ

ಸಡಗರ ಸಂಭ್ರಮದಿಂದ ಕ್ರಿಸ್‌ಮಸ್ ಆಚರಣೆ: ಕ್ರೈಸ್ತ ಬಾಂಧವರಿಂದ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ
Published on

ಹಾಸನ: ನಗರದಾದ್ಯಂತ ಸೋಮವಾರ ಕ್ರಿಸ್‌ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು. ಬಣ್ಣ- ಬಣ್ಣದ ನಾನಾ ಬಗೆಯ ಕೇಕ್, ಚಾಕೋಲೇಟ್, ಮೇಣದ ಬತ್ತಿಗಳ ಬೆಳಕಿನಿಂದ ಹಬ್ಬದಲ್ಲಿ ಪಾಲ್ಗೊಂಡು ಪರಸ್ಪರ ಸಿಹಿ ತಿನಿಸಿ, ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.
ನಗರದ ಆರ್.ಸಿ.ರಸ್ತೆಯ ಸಿಎಸ್‌ಐ ವೆಸ್ಲಿ ಚರ್ಚ್ ಹಾಗೂ ಎನ್.ಆರ್.ವೃತ್ತದ ಹತ್ತಿರ ಇರುವ ಸಂತ ಫಿಲೋಮಿನ ಚರ್ಚ್‌ಗಳಲ್ಲಿ ಕ್ರೈಸ್ತರು ಮೆಣದ ಬತ್ತಿಗಳ ಹೊತ್ತಿಸಿ ಸಂಬಂಧಿಕರು, ಸೇಹಿತರು, ಕುಟುಂಬ ಸದಸ್ಯರೊಂದಿಗೆ ಏಸುಕ್ರಿಸ್ತನ ಹುಟ್ಟು ಹಬ್ಬದ ಶುಭಾಶಯ ಹೇಳಿ ಹಬ್ಬವನ್ನು ಆಚರಿಸಿದರು.
ಏಸುಕ್ರಿಸ್ತನ ಜನ್ಮ ದಿನವನ್ನು ಕ್ರಿಸ್‌ಮಸ್ ಹಬ್ಬವನ್ನಾಗಿ ಕ್ರೈಸ್ತ ಬಾಂಧವರೆಲ್ಲರು ಸಡಗರದಿಂದ ಕೇಕ್ ಕತ್ತರಿಸಿ ಮತ್ತು ಚಾಕೋಲೇಟ್‌ಗಳನ್ನು ನೀಡಿ ಜೀವನದಲ್ಲಿ ಒಳ್ಳೆಯದಾಗಲಿ ಎಂದು ಶುಭ ಆರೈಸುತ್ತಾರೆ. ಏಸು ಹುಟ್ಟಿದ ಡಿ.24ರ ಮಧ್ಯರಾತ್ರಿ ಸರಿಯಾಗಿ 12ಕ್ಕೆ ಚರ್ಚ್‌ಗಳಲ್ಲಿ ಸುಮಾರು ಒಂದು ತಾಸು ಬಹಳ ಶ್ರದ್ಧೆ, ಭಕ್ತಿಯಿಂದ ಪ್ರಾರ್ಥನೆಯನ್ನು ಮಾಡುತ್ತಾರೆ. ಸಾಮಾನ್ಯ ದಿನಗಳಲ್ಲಿ ಅರ್ಥ ತಾಸು ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ. ಹಬ್ಬದಂದು ಮಾತ್ರ ಹೆಚ್ಚು ಕಾಲ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಸಾಂಕೇತಿಕವಾಗಿ ಮೇಣದ ಬೆಳಕಿನಲ್ಲಿ ಜನರು ಏಸುವನ್ನು ಕಾಣುತ್ತಾರೆ. ಏಸು ಬೆಳಕಿನಿಂದ ಜನಸಾಮಾನ್ಯರ ಕಷ್ಟಗಳನ್ನು ನೀಗಿಸುತ್ತಾನೆ ಎಂಬ ಸಂಪ್ರದಾಯವಿದೆ.
ಮನೆ ಮನೆಗಳಲ್ಲಿ ಆಚರಣೆ
ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಕ್ರೈಸ್ತ ಬಾಂಧವರು ತಮ್ಮ ಮನೆ ಮನೆಗಳಲ್ಲಿ ಬಾಲ ಏಸುವನ್ನು ಪ್ರತಿಷ್ಠಾಪಿಸಿ ರಾತ್ರಿಯಿಂದಲೇ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.

ಎಲ್ಲರೂ ಆಚರಿಸುವ ಹಬ್ಬ:
ಸಂತ ಅಂತೋನಿ ದೇವಾಲಯದ ಫಾದರ್ ಪ್ಯಾಟ್ರಿಕ್ ಜಯರಾವ್ ಸುದ್ದಿಗಾರರೊಂದಿಗೆ ಮಾತನಾಡಿ, ಡಿಸೆಂಬರ್ ತಿಂಗಳಲ್ಲಿ ಬರುವ ಕ್ರಿಸ್‌ಮಸ್ ಎಂಬುದು ಯೇಸು ಕ್ರಿಸ್ತನ ಜನನದ ಹಬ್ಬವಾಗಿದೆ. ಪ್ರತಿ ವರ್ಷವೂ ಡಿಸೆಂಬರ್ 24 ರಂದು ಮಧ್ಯರಾತ್ರಿ 12 ಗಂಟೆಯಿಂದಲೇ ಬಹಳ ಹರ್ಷದಿಂದ, ಪ್ರೀತಿಯಿಂದ ಮತ ಬೇಧವಿಲ್ಲದೇ ಎಲ್ಲರೂ ಕೂಡ ಆಚರಿಸುವ ಹಬ್ಬವಾಗಿದೆ. ಹಲವಾರು ದೇಶಗಳಲ್ಲಿ ಇದು ಸಾಂಸ್ಕೃತಿಕ ಹಬ್ಬವು ಆಗಿದೆ ಎಂದರು.
24ರ ರಾತ್ರಿಯಲ್ಲಿ ಪ್ರಭು ಯೇಸುರವರ ಆರಾಧನೆ, ಬಲಿಪೂಜೆಗಳು ಇರುತ್ತವೆ. ಹಾಸನದ ಸಂತ ಅಂತೋನಿಯವರ ದೇವಾಲಯದಲ್ಲಿ ರಾತ್ರಿಯಿಂದಲೇ ಭಜನೆ ಮೂಲಕ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು. ಸಾವಿರಾರು ಜನರು ಇದರಲ್ಲಿ ಭಾಗಿಯಾಗಿದ್ದರು. ರೈತಾಪಿ ಬಂಧುಗಳಿಗೆ, ಕಾರ್ಮಿಕ ವರ್ಗದವರಿಗೆ ಹಾಗೂ ವಿಶೇಷವಾಗಿ ಸಮಸ್ತ ಜನತೆಗೆ ಸುಃಖ, ಶಾಂತಿ, ಸಮೃದ್ಧಿ, ನೆಮ್ಮದಿ, ಒಳ್ಳೆಯ ಮಳೆ, ಬೆಳೆಯಾಗಲಿ, ಕಾಯಿಲೆಗಳು ಬಾರದಂತೆ ಎಲ್ಲರೂ ನೆಮ್ಮದಿಯಾಗಿ ಇರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net