ಸಡಗರ ವರಮಹಾಲಕ್ಷ್ಮೀ ಹಬ್ಬ, ಮನೆಮನೆಗಳಲ್ಲಿ ಆರಾಧನೆ, ಹೊಸ ಬಟ್ಟೆ ತೊಟ್ಟು ಮಿಂಚಿದ ಹೆಂಗಳೆಯರು

20-Manjunath-HSK-03
Published on

ಬೆಂಗಳೂರು ಗ್ರಾಮಾಂತರ: ಬೆಲೆ ಏರಿಕೆ ನಡುವೆಯೂ ಜಿಲ್ಲೆಯಾದ್ಯಂತ ಸಂಭ್ರಮ ಸಡಗರದಿಂದ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಯಿತು.

ಶುಕ್ರವಾರ ಮುಂಜಾನೆಯೂ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು ತರಕಾರಿ ಖರೀದಿಗೆ ಜನ ಮುಗಿಬಿದ್ದಿದ್ದ ದೃಶ್ಯ ಕಂಡುಬಂತು. ಕೆಲವರು ಮುಂಜಾನೆ ಬ್ರಾಹ್ಮಿ ಮೂಹೂರ್ತದ ವೇಳೆಯಲ್ಲಿಯೇ ಮಹಾಲಕ್ಷ್ಮೀ ಪೂಜೆ ನೆರವೇರಿಸಿದರೆ, ಮತ್ತೆ ಅನೇಕರು ಬೆಳಗ್ಗೆ 10.30 ಬಳಿಕ ಆರಾಧನೆ ನಡೆಸಿದರು. ಬಡವ ಬಲ್ಲಿದರೆನ್ನೆದೆ ಅವರವರ ಶಕ್ತಿಗನುಸಾರ ಮನೆ ಮನೆಗಳಲ್ಲಿ ಮಹಾಲಕ್ಷ್ಮೀ ಮೂರ್ತಿಯನ್ನು ಪ್ರತಿಷ್ಠಾಪಿಸಿ ಆರಾಧಿಸಲಾಯಿತು.

ಹೊಸ ಬಟ್ಟೆಗಳಲ್ಲಿ ಮಿಂಚಿದ ಹೆಂಗಳೆಯರು: ಕಳೆದೆರಡು ವರ್ಷದಿಂದ ಕರೊನಾ ಹಬ್ಬದ ಸಡಗರವನ್ನು ನುಂಗಿಹಾಕಿತ್ತು, ಮಹಿಳೆಯರ ಅಚ್ಚುಮೆಚ್ಚಿನ ವರಮಹಾಲಕ್ಷ್ಮೀ ಹಬ್ಬವನ್ನು ಸಡಗರದಿಂದ ಆಚರಿಸಲು ಸಾಧ್ಯವಾಗದೆ ಬೇಸರಗೊಂಡಿದ್ದರು, ಆದರೆ ಈ ಬಾರಿ ಅದೆಲ್ಲ ಬೇಸರವನ್ನು ಗಂಟುಕಟ್ಟಿ ಹಬ್ಬದ ಆಚರಣೆಗೆ ಮಹಿಳೆಯರು ಸಡಗರಿಂದಲೇ ಸಿದ್ಧತೆ ನಡೆಸಿದ್ದರು. ಹೊಸ ಸೀರೆ ತೊಟ್ಟು, ಆಭರಣಗಳನ್ನು ಧರಿಸಿ ನೆರೆಹೊರೆಯವರಿಗೆ ಅರಿಶಿಣ, ಕುಂಕುಮ, ತಾಂಬೂಲ ನೀಡಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು. ಸಂಪತ್ತು ವೃದ್ಧಿಸಲಿ ಎಂಬ ಪ್ರಾರ್ಥನೆಯೊಂದಿಗೆ ಲಕ್ಷ್ಮೀದೇವಿಗೆ ನೈವೇಧ್ಯ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.

ದೇಗುಲಗಳು ಬಂದ್: ಕರೊನಾ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ದೇಗುಲಗಳಲ್ಲೂ ಭಕ್ತರಿಗೆ ನಿಷೇಧ ಹೇರಿದ್ದರಿಂದ ಜಿಲ್ಲೆಯ ಜನರು ಮನೆಗಳಲ್ಲಿಯೇ ದೇವಿಯ ಆರಾಧನೆ ನಡೆಸಿದರು. ಎಂದಿನಂತೆ ದೇಗುಲಗಳಲ್ಲಿ ಅರ್ಚಕರು ದೇವರಿಗೆ ಪೂಜಾಕೈಂಕರ್ಯ ನೆರವೇಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net