ಸಚಿವರ ಸಭೆಯಲ್ಲೇ ಅಧಿಕಾರಿಗಳ ನಿರ್ಲಕ್ಷ್ಯ

28 vikram 7
Published on

ಧಾರವಾಡ: ಕಾರ್ವಿುಕ ಹಾಗೂ ಸಕ್ಕರೆ ಸಚಿವ ಶಿವರಾಮ ಹೆಬ್ಬಾರ ಅವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಕರೊನಾ ತಡೆಗೆ ಜಾರಿಯಲ್ಲಿರುವ ನಿಯಮಗಳನ್ನು ಗಾಳಿಗೆ ತೂರಿದ್ದು ಕಂಡುಬಂತು.

ಪರಸ್ಪರ ಅಂತರ ನಿರ್ವಹಣೆ, ಮಾಸ್ಕ್ ಧಾರಣೆ ವಿಷಯದಲ್ಲಿ ನಿರ್ಲಕ್ಷ್ಯ ಕಂಡುಬಂತು. ಶಾಸಕ ಪ್ರಸಾದ ಅಬ್ಬಯ್ಯ, ಅಧಿಕಾರಿಗಳು ಮಾಸ್ಕ್ ಧರಿಸಿದ್ದರೆ, ಸಚಿವರೇ ನಿರಾಸಕ್ತಿ ವಹಿಸಿದ್ದರು. ಕೆಲ ಯೋಜನೆಗಳಡಿ ಚೆಕ್ ವಿತರಿಸಲು ಫಲಾನುಭವಿಗಳನ್ನು ಆಹ್ವಾನಿಸಲಾಗಿತ್ತು. ನೂರಾರು ಕಾರ್ವಿುಕರೂ ಜಮಾಯಿಸಿದ್ದರು. ಹೀಗಾಗಿ, ಕರೊನಾ ತಡೆ ನಿಯಮಗಳು ಮರೆತು ಹೋದಂತಾಗಿತ್ತು.

ಮಾಧ್ಯಮದವರು ಸಭೆಗೆ ಆಗಮಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ, ದೈಹಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದರಾದರೂ ಹಲವರು ಕಿವಿಗೆ ಹಾಕಿಕೊಳ್ಳಲಿಲ್ಲ.

ಸಭೆ ನಂತರ ಅನೇಕ ಕಾರ್ವಿುಕ ಸಂಘಟನೆಗಳ ವತಿಯಿಂದ ಸಚಿವರಿಗೆ ಸನ್ಮಾನ ಮಾಡಲು ನೂರಾರು ಜನರು ವೇದಿಕೆ ಬಳಿ ಜಮಾಯಿಸಿದ್ದರು. ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಜನರನ್ನು ದೂರ ಸರಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net