

ಕಲಬುರಗಿ: ಸರ್ಕಾರದ ಕಾಮಗಾರಿಗಳನ್ನು ಮಾಡಿ ಜೀವನ ಸಾಗಿಸಿ, ಕುಟುಂಬಕ್ಕೆ ಆಧಾರವಾಗಿದ್ದ ಸಚಿನ ಪಾಂಚಾಳ ಆತ್ಮಹತ್ಯೆಗೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಸಹಚರರಾಗಿರುವ ರೌಡಿಗಳೇ ಕಾರಣ, ಕೂಡಲೇ ಅವರನ್ನು ಬಂಧಿಸಬೇಕು, ಸಚಿವರು ರಾಜೀನಾಮೆ ನೀಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ವಿಶ್ವಕರ್ಮ ಸಮಾಜದಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದ ಬಳಿ ಬುಧವಾರ ನೂರಾರು ಜನರು ಮಾನವ ಸರಪಳಿ ನಿರ್ಮಿಸಿ, ಟೈರ್‌ಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ, ಸಚಿವರ ವಿರುದ್ಧ ಘೋಷಣೆ ಕೂಗಿದರು. ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ನ್ಯಾಯ ನೀಡಿ, ತನಿಖೆ ಸಿಬಿಐಗೆ ವಹಿಸಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ ಜನರ ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ. ಕೊಲೆ, ಕೊಲೆ ಯತ್ನ, ಆತ್ಮಹತ್ಯೆಗೆ ಕಾರಣವಾಗುತ್ತಿದೆ. ಜನರು ನಿತ್ಯದ ಕೆಲಸ ಮಾಡಲು ಹೆದರುವಂತ ಸ್ಥಿತಿ ಸೃಷ್ಟಿಯಾಗಿದೆ. ಸಮಾಜಘಾತುಕರು, ಗುಂಡಾಗಳು ಹೆಚ್ಚಾಗಿದ್ದಾರೆ. ಸಚಿನ ಆತ್ಮಹತ್ಯೆಯಲ್ಲಿ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರೌಡಿಗಳ ಕಿರುಕುಳ ಇರುವುದು ಸ್ಪಷ್ಟವಾಗಿದ್ದು, ಡೆತ್‌ನೋಟ್‌ನಲ್ಲಿ ಎಲ್ಲವೂ ಉಲ್ಲೇಖವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು, ಯುವಕನ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ಒದಗಿಸಬೇಕು, ಯುವಕನ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ಒದಗಿಸಬೇಕು, ನಿಷ್ಪಕ್ಷಪಾತ ತನಿಖೆ ನಡೆಯಲು ಸರ್ಕಾರದ ಉನ್ನತ ಹಂತದಲ್ಲಿರುವ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರಿಗೆ ಸಲ್ಲಿಸಿದರು. ಪ್ರತಿಭಟನೆಗೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಬೆಂಬಲ ವ್ಯಕ್ತಪಡಿಸಿತ್ತು.
ಸುಲೇಪೇಟ ಏಕದಂಡಗಿ ಮಠದ ಶ್ರೀ ದೊಡ್ಡೇಂದ್ರ ಸ್ವಾಮೀಜಿ, ಮೂರುಝಾವ ಮಠದ ಶ್ರೀ ಪ್ರಣವನಿರಂಜನ ಸ್ವಾಮೀಜಿ, ಶ್ರೀ ಬ್ರಹ್ಮಾನಂದ ಸ್ವಾಮೀಜಿ, ಶ್ರೀ ದೇವಿಂದ್ರ ಸ್ವಾಮೀಜಿ, ಶ್ರೀ ಶಿವಾನಂದ ಶಾಸ್ತಿç, ಶ್ರೀ ಈರಣ್ಣ ಮುತ್ಯಾ, ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ, ಕಾಡಾ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ, ವಿಶ್ವಕರ್ಮ ಹೋರಾಟ ಸಮಿತಿ ಅಧ್ಯಕ್ಷ ದೇವಿಂದ್ರ ದೇಸಾಯಿ ಕಲ್ಲೂರ, ಲೋಹಿತ ಕಲ್ಲೂರ, ಸಮಾಜದ ಉಪಾಧ್ಯಕ್ಷ ಮನೋಹರ ಪೊದ್ದಾರ, ಪ್ರಮುಖರಾದ ಕುಪ್ಪಣ್ಣ ಖೇಳಗಿ, ದಶರಥ ಪೊದ್ದಾರ, ಅಶೋಕ ಪೊದ್ದಾರ, ಕಮಲಾಕರ ಕಾರ್ಪೆಂಟರ್, ಕೇಶ್ವರ ಸೀತನೂರ, ಶಿವಾನಂದ ಕಲ್ಲೂರ, ರಾಜು ಮಹಾಗಾಂವ, ಸುನೀಲ ಕಾರ್ಪೆಂಟರ್, ಅಶೋಕ ಪೊದ್ದಾರ, ಬಂಗಾರೆಪ್ಪ ಖೇಳಗಿ, ವಿಶ್ವನಾಥ ಸೋನಾರ, ರಾಜು ಖೇಳಗಿ, ರಾಕೇಶ ಮಾಡ್ಯಾಳ, ಅಮೃತ ಹಳ್ಳಿ, ರಾಕೇಶ ಘಟ್ಟಿಕರ್, ರಾಜು ಪೊದ್ದಾರ, ಗುರು ಘಾಣೂರ, ಲೋಕೇಶ ಶೀಲವಂತ, ಮಹೇಶ ತಡಕಲ್, ಈರಣ್ಣ ಸರಸಂಬಾ, ಈರಣ್ಣ ದುತ್ತರಗಾಂವ ಇತರರಿದ್ದರು.