ಸಚಿವರ ಬೆನ್ನುಬಿದ್ದು ದುಡ್ಡು ತರುವೆ

CTD MP MEETING
Published on

ಚಿತ್ರದುರ್ಗ: ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಪ್ರಸ್ತಾವನೆ ಸಿದ್ದಪಡಿಸಿದರೆ, ಕೇಂದ್ರದ ಮೇಲೆ ಒತ್ತಡ ತಂದು ಅನುದಾನ ತರುತ್ತೇನೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.
ಜಿಪಂ ಸಭಾಂಗಣದಲ್ಲಿ ಶುಕ್ರವಾರ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಹಿಂದೆ ನಾನು ನೀರಾವರಿ ಸಚಿವನಾಗಿದ್ದಾಗ ಕೇಂದ್ರದಿಂದ ಪ್ರತಿ ವರ್ಷ 2 ಸಾವಿರ ಕೋಟಿ ರೂ. ಅನುದಾನ ತಂದು ಇಲಾಖೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದ್ದೇನೆ. ಈಗ ಸಂಸದನಾಗಿ ಕೇಂದ್ರದ ಎಲ್ಲ ಮಂತ್ರಿಗಳ ಬೆನ್ನು ಬಿದ್ದು ಹಣ ತರುತ್ತೇನೆ. ಆದ್ದರಿಂದ ಇಲಾಖೆವಾರು ಪ್ರಸ್ತಾವನೆ ಸಿದ್ಧಪಡಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಚೆಕ್‌ಡ್ಯಾಂ, ನಾಲಾ ಬಂಡ್, ಬ್ಯಾರೇಜ್‌ಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮಳೆ ನೀರು ಕೊಯ್ಲು ಕಾರ‌್ಯಕ್ರಮ ಪರಿಣಾಕಾರಿಯಾಗಿ ಅನುಷ್ಠಾನವಾಗಬೇಕು. ಜಲಜೀವನ್ ಮಿಷನ್ ಅಡಿ ಶಾಶ್ವತ ನೀರಿನ ಮೂಲದ ಮೂಲಕ ಸುರಕ್ಷಿತ ನೀರು ಪೂರೈಸಲು ಸಣ್ಣ ನೀರಾವರಿ ಇಲಾಖೆ ಮತ್ತು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಜಂಟಿಯಾಗಿ ಯೋಜನೆ ರೂಪಿಸುವಂತೆ ಸೂಚಿಸಿದ ಸಂಸದರು, ಕೊಳವೆಬಾವಿಗಳನ್ನು ನೆಚ್ಚಿಕೊಂಡು ಜೆಜೆಎಂ ಅನುಷ್ಠಾನ ಸಲ್ಲದು ಎಂದು ಹೇಳಿದರು.
ಪಹಣಿಯಲ್ಲಿ ನಮೂದಾಗುವ ವಾರಸುದಾರರ ಹೊಸ ಹೆಸರನ್ನು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ನೋಂದಾಯಿಸುವ ಮತ್ತು ಎಫ್‌ಐಡಿ ಸೃಜನೆಗೆ ಕುರಿತು ಜಾಗೃತಿ ಮೂಡಿಸುವಂತೆ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್‌ಗೆ ಸೂಚಿಸಿದರು.
ಪ್ರತಿಕ್ರಿಯಿಸಿದ ಮಂಜುನಾಥ್, ಜಿಲ್ಲೆಯಲ್ಲಿ 3.1 ಲಕ್ಷ ರೈತರಿದ್ದು, 3.37 ಲಕ್ಷ ಎಫ್‌ಐಡಿ ಸೃಜನೆ ಆಗಿದೆ. ಫಸಲ್ ಬಿಮಾ ಯೋಜನೆಯಡಿ ಈವರೆಗೂ 55,164 ರೈತರ ನೋಂದಣಿಯಾಗಿದ್ದು, ರಾಜ್ಯದಲ್ಲಿ 4ನೇ ಸ್ಥಾನದಲ್ಲಿದೆ. ಜುಲೈ 31ರ ವವರೆಗೂ ನೋಂದಣಿಗೆ ಅವಕಾಶ ಇದೆ. ಕಳೆದ ವರ್ಷ 274 ಕೋಟಿ ರೂ. ವಿಮೆ ಪಾವತಿಯಾಗಿದೆ. ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದರು.
ಹೊಸದುರ್ಗ ತಾಲೂಕಿನಲ್ಲಿ ಕಳೆದ ವರ್ಷ 19 ಸಾವಿರ ಹೆಕ್ಟೇರ್ ವಿಸ್ತೀರ್ಣದಲ್ಲಿದ್ದ ಸಿರಿಧಾನ್ಯ ಬೆಳೆ ಈ ವರ್ಷ 24 ಸಾವಿರ ಹೆಕ್ಟೇರ್‌ಗೆ ಹೆಚ್ಚಳ ವಾಗಿದೆ ಎಂದರು.
ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆಗೆ ರೈತರನ್ನು ಪ್ರೋತ್ಸಾಹಿಸುವಂತೆ ತೋಟಗಾರಿಕೆ ಅಧಿಕಾರಿಗಳಿಗೆ ಸೂಚಿಸಿದ ಸಂಸದರು, ಖಾಸಗಿ ಆಸ್ಪತ್ರೆಯಲ್ಲಿರುವ ರೋಗಿಗಳ ಸಂಖ್ಯೆ ಸಹಿತ ಜಿಲ್ಲೆಯಲ್ಲಿ ಡೆಂೆ ಜ್ವರಕ್ಕೆ ತುತ್ತಾಗಿರುವವರ ನಿಖರ ಮಾಹಿತಿ ಸಂಗ್ರಹಿಸಬೇಕು, ಹತೋಟಿಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಡಿಎಚ್‌ಒ ಡಾ.ರೇಣುಪ್ರಸಾದ್ ಅವರಿಗೆ ತಿಳಿಸಿದರು.
ವೈದ್ಯ ಹುದ್ದೆ ಭರ್ತಿ ಮಾಡಬೇಕು, ವೈದ್ಯರು, ಸಿಬ್ಬಂದಿ ಇಲ್ಲದಿದ್ದರೆ ಇಲಾಖೆ ಪಾರ್ಶ್ವವಾಯುವಿಗೆ ತುತ್ತಾದಂತೆ ಆಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ನಿತ್ಯ 1500 ಹೊರರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಎಸ್ ಡಾ.ಎಸ್.ಪಿ.ರವೀಂದ್ರ ಹೇಳಿದರು.
ಕೈಗಾರಿಕಾ ವಲಯ ಲೇಔಟ್ ಅಭಿವೃದ್ಧಿಗೆ ಜತೆಗೆ ಹಂಚಿಕೆ ಕೆಲಸವನ್ನು ತ್ವರಿತಗೊಳಿಸುವಂತೆ ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಬಿ.ಆನಂದ್‌ಗೆ ಸಂಸದರು ನಿರ್ದೇಶಿಸಿದರು.
ಪಿಎಂ ಆದರ್ಶ ಗ್ರಾಮ ಯೋಜನೆ, ಮತ್ತಿತರ ಇಲಾಖೆಗಳ ಪ್ರಗತಿ ಕುರಿತು ಚರ್ಚಿಸಲಾಯಿತು. ಎಡಿಸಿ ಬಿ.ಟಿ.ಕುಮಾರಸ್ವಾಮಿ, ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ, ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಯೋಜನಾ ನಿರ್ದೇಶಕ ಡಾ.ರಂಗಸ್ವಾಮಿ, ಎಸಿ ಎಂ.ಕಾರ್ತಿಕ್ ಮತ್ತಿತರರು ಇದ್ದರು.

ಕುಡಿವ ನೀರು ಪೂರೈಕೆ ಅಸರ್ಮಪಕ
ಚಿತ್ರದುರ್ಗ ನಗರ ವ್ಯಾಪ್ತಿ ಕುಡಿವ ನೀರಿನ ಸಮಸ್ಯೆಗೆ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ವಾರಕ್ಕೆ ಮೂರ‌್ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತದೆ. ಶಾಂತಿಸಾಗರದಿಂದ 14 ಹಾಗೂ ವಿವಿ ಸಾಗರದಿಂದ 6 ಎಂಎಲ್‌ಡಿ ನೀರು ಪಡೆಯಲಾಗುತ್ತಿದ್ದರೂ ವಿತರಣೆ ಅಸಮಪರ್ಕ ವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಿಷ್ಟಾಚಾರ ಪಾಲಿಸಿ
ಅಧಿಕಾರಿಗಳು ಸಭೆಗಳನ್ನು ಆಯೋಜಿಸುವಾಗ ಶಿಷ್ಟಾಚಾರ ಸರಿಯಾಗಿ ಪಾಲನೆ ಆಗಬೇಕು. ಸಭೆ ದಿನಾಂಕಗಳಿಗೆ ಸಂಬಂಧಿಸಿದಂತೆ ನನ್ನೊಂದಿಗೆ ಚರ್ಚಿಸಬಹುದು. ಶಿಷ್ಟಾಚಾರದಲ್ಲಿ ಲೋಪವಾಗುವುದು ಆಡಳಿತಕ್ಕೆ ಒಳ್ಳೆಯದಲ್ಲ, ನಿಮಗೂ ಒಳ್ಳೆಯದಾಗದೆಂದು ಅಧಿಕಾರಿಗಳನ್ನು ಕಾರಜೋಳ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net