

ತಿ.ನರಸೀಪುರ: ಮೈಸೂರು ವಿಶ್ವವಿದ್ಯಾಲಯ ಕುಲಸಚಿವೆ ಹಾಗೂ ತಿ.ನರಸೀಪುರ ತಾಲೂಕು ಉಸ್ತುವಾರಿ ಅಧಿಕಾರಿ ಎಂ.ಕೆ. ಸವಿತಾ ಅವರು ತಾಲೂಕು ಕಚೇರಿಯಲ್ಲಿ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವರ ತ್ರೈಮಾಸಿಕ ಕೆಡಿಪಿ ಸಭೆಯ ಅನುಪಾಲನಾ ವರದಿ ಸಂಬಂಧ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.
ತಾಲೂಕು ಭೇಟಿಯ ಹಿನ್ನೆಲೆಯಲ್ಲಿ ತಿ.ನರಸೀಪುರಕ್ಕೆ ಆಗಮಿಸಿದ್ದ ಅವರು, ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ, ಆದೇಶಗಳನ್ನು ಚಾಚೂತಪ್ಪದೆ ಪಾಲಿಸಿ, ಅನುಷ್ಠಾನಕ್ಕೆ ತರಬೇಕೆಂದು ತಾಕೀತು ಮಾಡಿದರು. ಆಡಳಿತಾತ್ಮಕ ವಿಷಯಗಳ ಬಗ್ಗೆಯೂ ಮಾಹಿತಿ ಪಡೆದು ಅಧಿಕಾರಿಗಳೊಂದಿಗೆ ವಿಸ್ತೃತವಾಗಿ ಚರ್ಚೆ ನಡೆಸಿದರು.
ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರನ್ನು ಅನಗತ್ಯವಾಗಿ ಅಲೆಸಬಾರದು. ತಾಲೂಕು ಕಚೇರಿಯಲ್ಲಿನ ತಾಂತ್ರಿಕ ಸಮಸ್ಯೆಗಳನ್ನ ಸರಿಪಡಿಸಿ, ಕಾನೂನಿನ ಚೌಕಟ್ಟಿನೊಳಗೆ ಆಗುವಂತಹ ಕೆಲಸಗಳನ್ನು ಮುತುವರ್ಜಿ ವಹಿಸಿ ಮಾಡಿಕೊಡಬೇಕು. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸಬೇಕು ಎಂದು ತಾಕೀತು ಮಾಡಿದರು.
ಬಿಸಿಎಂ ಹಾಸ್ಟೆಲ್‌ಗಳ ನಿರ್ವಹಣೆ, ಜಲ ಜೀವನ್ ಮಿಷನ್ ಅಡಿಯಲ್ಲಿನ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಲು ಮತ್ತು ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸಲು ಕೈಗೊಳ್ಳಬೇಕಾದ ಕ್ರಮ ಹಾಗೂ ಸರ್ಕಾರಿ ಕಟ್ಟಡಗಳಿಗೆ ನಿವೇಶನ ಗುರುತಿಸುವಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಸಾರ್ವಜನಿಕ ಆಸ್ಪತ್ರೆಗೆ ಭೇಟಿ : ತಾಲೂಕು ಕಚೇರಿ ಸಭೆಯ ಬಳಿಕ ಉಸ್ತುವಾರಿ ಅಧಿಕಾರಿ ಎಂ.ಕೆ.ಸವಿತಾ ಅವರು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ವಿವಿಧ ವಾರ್ಡ್‌ಗಳನ್ನು ಪರಿಶೀಲಿಸಿ ಒಳರೋಗಿಗಳಿಂದ ವೈದ್ಯೋಪಚಾರದ ಬಗ್ಗೆ ಮಾಹಿತಿ ಪಡೆದರು. ಆಸ್ಪತ್ರೆಯ ನಿರ್ವಹಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಹೆಚ್ಚುವರಿ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವಂತೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆಗಳನ್ನು ಒದಗಿಸುವಂತೆ ತಾಲೂಕು ವೈದ್ಯಾಧಿಕಾರಿ ಡಾಕ್ಟರ್ ಎಂ.ಕೆ. ರವಿಕುಮಾರ್ ಹಾಗೂ ಆಡಳಿತ ವೈದ್ಯಾಧಿಕಾರಿ ಡಾ.ಎಸ್.ಬಿ.ಅಭಿಲಾಷ್ ಅವರಿಗೆ ತಿಳಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್, ಕಾರ್ಯನಿರ್ವಹಣಾಧಿಕಾರಿ ಪಿ.ಎಸ್.ಅನಂತರಾಜು, ಸಮಾಜ ಕಲ್ಯಾಣ ಅಧಿಕಾರಿ ವಿನೂತನ್, ಪರಿಶಿಷ್ಟ ಪಂಗಡಗಳ ಕಲ್ಯಾಣ ಅಧಿಕಾರಿ ಕೋಮಲಾ, ಜಿ.ಪಂ. ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪಿ.ಎನ್.ಚರಿತಾ, ತೋಟಗಾರಿಕೆ ಸಹಾಯಕ ನಿರ್ದೇಶಕಿ ಶಾಂತಾ, ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಎಂ.ರಾಜಣ್ಣ, ಪುರಸಭೆ ಮುಖ್ಯ ಅಧಿಕಾರಿಗಳಾದ ಬಿ.ಕೆ.ವಸಂತಕುಮಾರಿ, ಆರ್. ಹೇಮಂತ್‌ರಾಜ್, ತಾ.ಪಂ. ಮಾಜಿ ಸದಸ್ಯ ರಾಮಲಿಂಗಯ್ಯ ಇತರರು ಇದ್ದರು.