ಸಚಿವ ಸ್ಥಾನದಿಂದ ಅಶ್ವತ್ಥನಾರಾಯಣ ಅವರನ್ನು ವಜಾಗೊಳಿಸಿ; ಕಾಂಗ್ರೆಸ್ ಪ್ರತಿಭಟನೆ

WEEEB SGGGRRR
Published on

ಸಾಗರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೊಲೆ ಮಾಡುವಂತೆ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಜತೆಗೆ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ತಕ್ಷಣ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.

ಸಚಿವರು ಮಂಡ್ಯದಲ್ಲಿ ನಡೆದ ಸಭೆಯಲ್ಲಿ ನಿಮಗೆ ಟಿಪ್ಪು ಬೇಕಾ, ಸಾರ್ವಕರ್ ಬೇಕಾಎಂದು ಪ್ರಶ್ನಿಸುತ್ತಾ, ಟಿಪ್ಪುವನ್ನು ಉರಿಗೌಡ ಮತ್ತು ನಂಜೇಗೌಡ ಹೇಗೆ ಕೊಂದರೋ ಹಾಗೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂದು ಪ್ರಚೋದನಾಕಾರಿಯಾಗಿ ಕಾರ್ಯಕರ್ತರಿಗೆ ಕರೆ ಕೊಟ್ಟಿರುವುದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಸಂವಿಧಾನದ ಮೇಲೆ ಕೈಯಿಟ್ಟು ಪ್ರತಿಜ್ಞೆ ಮಾಡಿ ಸಚಿವರಾಗಿರುವ ಅಶ್ವತ್ಥನಾರಾಯಣ ಅವರ ಇಂತಹ ಪ್ರಚೋದನಾಕಾರಿ ಹೇಳಿಕೆ ಕ್ರಿಮಿನಲ್ ಅಪರಾಧವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ಹೇಳಿದರು.

ಕೊಲೆ ಮಾಡುವುದು ಎಷ್ಟು ತಪ್ಪೋ ಪ್ರಚೋದನೆ ನೀಡುವುದು ಸಹ ಅಷ್ಟೇ ಘೋರ ಅಪರಾಧ. ಎರಡೂ ಪ್ರಕರಣದಲ್ಲಿ ಒಂದೇ ರೀತಿಯ ಶಿಕ್ಷೆ ಕಾನೂನಿನಲ್ಲಿದೆ. ಕೊಲೆ ಮಾಡಿ ಎಂಬಂತಹ ಹೇಳಿಕೆ ನೀಡಿದ ಡಾ. ಅಶ್ವತ್ಥನಾರಾಯಣ ಅವರನ್ನು ರಾಜ್ಯ ಸರ್ಕಾರ ರಕ್ಷಣೆ ಮಾಡುತ್ತಿದೆ. ಪೊಲೀಸ್ ಇಲಾಖೆ ಈವರೆಗೆ ಅವರನ್ನು ಬಂಧಿಸದಿರುವುದು ಖಂಡನೀಯ. ಕೂಡಲೆ ಅವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net