ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ : ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸದಿರಿ ಎಂದ ಶಾಸಕ ಜ್ಯೋತಿಗಣೇಶ್

09Tmk_JyothiGanesh_SmartCity
Published on

ತುಮಕೂರು : ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಸೇರಲು ದೊಡ್ಡಮಟ್ಟದ ಲಾಬಿ ಜತೆಗೆ ಸಮಾಜದ ಮುಖಂಡರ ಮೂಲಕ ಬಿಜೆಪಿ ವರಿಷ್ಠರು ಹಾಗೂ ಸಿಎಂ ಮೇಲೆ ಒತ್ತಡ ಹೇರುತ್ತಿರುವ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಇದರ ಮಧ್ಯೆ ‘ನನ್ನನ್ನು ಸಚಿವ ಸ್ಥಾನದ ಆಕಾಂಕ್ಷಿಯೆಂದು ಬಿಂಬಿಸುವುದಾಗಲಿ ಅಥವಾ ಪ್ರಚಾರ ಮಾಡುವುದಾಗಲಿ’ಯಾರೂ ಮಾಡಬಾರದೆಂದು ಕಳಕಳಿಯ ಮನವಿ ಮಾಡಿಕೊಳ್ಳುವ ಮೂಲಕ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ವಿಭಿನ್ನ ಸಾಲಿನಲ್ಲಿ ನಿಂತಿದ್ದಾರೆ.

ಸಂಸದ ಜಿ.ಎಸ್.ಬಸವರಾಜು ಹಾಗೂ ಅವರ ಪುತ್ರ ಜಿ.ಬಿ.ಜ್ಯೋತಿಗಣೇಶ್ ಬಿಎಸ್‌ವೈ ಅತ್ಯಾಪ್ತರೆನಿಸಿಕೊಂಡಿದ್ದು, ಕೆಜೆಪಿ ಕಟ್ಟಿದಾಗಿನಿಂದಲೂ ಅವರೊಂದಿಗೆ ಗುರುತಿಸಿಕೊಂಡಿದ್ದಾರೆ. ಇದರ ನಡುವೆ ಜಿಲ್ಲೆಯಲ್ಲಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವರು ಈಗ ‘ಜಾತಿ’ ಅಸ ಮುಂದಿಟ್ಟುಕೊಂಡು ವರಿಷ್ಠರ ಮೇಲೆ ಒತ್ತಡ ಹೇರುವಲ್ಲಿ ನಿರತರಾಗಿದ್ದಾರೆ.

ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಮೊದಲ ಬಾರಿ ಶಾಸಕನಾಗಿ ಗೆದ್ದಿರುವ ನನ್ನನ್ನು ಸಚಿವ ಸ್ಥಾನದ ಆಕಾಂಕ್ಷಿ ಎನ್ನುವುದು ಸಮಂಜಸವಲ್ಲ. ಪಕ್ಷಕ್ಕಾಗಿ ಹಗಲಿರುಳು ದುಡಿದು ಹಲವು ಬಾರಿ ಶಾಸಕರಾಗಿದ್ದು ಅವರಿಗಿನ್ನು ಉನ್ನತ ಹುದ್ದೆ ದೊರೆತಿಲ್ಲ. ಜಿಲ್ಲೆಯಲ್ಲಿ ಹಿರಿಯ ನಾಯಕರು, ಅನುಭವಿಗಳಿದ್ದಾರೆ. ನಾನು ಯಾವುದೇ ಸಚಿವ ಸ್ಥಾನ ಅಪೇಕ್ಷಿಸುವುದಿಲ್ಲ ಎಂದು ಜ್ಯೋತಿಗಣೇಶ್ ಮನವಿ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ರಾಜೇಶ್‌ಗೌಡ, ಚಿದಾನಂದ ಗೌಡಗೆ ಸಚಿವಸ್ಥಾನ ಕೊಡಿ : ರಾಜ್ಯದಲ್ಲಿ ಕುಂಚಿಟಿಗ ಜನಾಂಗದ ಮತದಾರರು ಸುಮಾರು 18 ರಿಂದ 20 ವಿಧಾನಸಭೆ, 5 ಲೋಕಸಭಾ ಕ್ಷೇತ್ರಗಳಲ್ಲಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಗಣನೀಯವಾಗಿ ನೆಲೆಸಿದ್ದು ಬಿಜೆಪಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಈ ಸಮುದಾಯದ ಶಿರಾ ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಹಾಗೂ ಎಂಎಲ್ಸಿ ಚಿದಾನಂದ್ ಎಂ.ಗೌಡರಿಗೆ ಕುಂಚಿಟಿಗ ಕೋಟಾದಡಿ ಸಚಿವ ಸ್ಥಾನಕ್ಕೆ ಪರಿಗಣಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕುಂಚಿಟಿಗ ಒಕ್ಕಲಿಗ ವಿದ್ಯಾಭಿವೃದ್ಧಿ ಸಂಘ ಆಗ್ರಹಿಸಿದೆ. ಈ ಉತ್ಸಾಹಿ ಯುವಕರಿಬ್ಬರಿಗೆ ಸೂಕ್ತ ಸ್ಥಾನ ಮಾನ ನೀಡಿ ಜನಾಂಗದ ಮತ್ತು ದುರ್ಬಲ ಜನಾಂಗದವರ ಏಳಿಗೆಗೆ ಸಹಕಾರಿಯಾಗಬೇಕೆಂದು ಸಿಎಂಗೆ ಕುಂಚಿಟಿಗ ಜನಾಂಗದ ಪರವಾಗಿ ಒಕ್ಕೊರಲ ಆಗ್ರಹಪೂರ್ವಕ ಮನವಿಯನ್ನು ಕಾರ್ಯಾಧ್ಯಕ್ಷ ಆರ್. ಕಾಮರಾಜ್, ಉಪಾಧ್ಯಕ್ಷ ವೈ.ಆರ್. ವೇಣುಗೋಪಾಲ್ ಪ್ರಕಟಣೆ ಮೂಲಕ ಮಾಡಿದ್ದಾರೆ.

ಮಾಧುಸ್ವಾಮಿ ಮೆರಿಟ್ ಕೋಟಾ : ಬೊಮ್ಮಾಯಿ ಸಂಪುಟ ಸೇರಲು ದೆಹಲಿವರೆಗೆ ದಂಡಯಾತ್ರೆ ಕೈಗೊಂಡಿರುವವರ ನಡುವೆ ಸಣ್ಣ ನೀರಾವರಿ ಸಚಿವರಾಗಿ ಸಮರ್ಥವಾಗಿ ತಮ್ಮ ಹೊಣೆ ನಿರ್ವಹಿಸಿರುವ ಉತ್ತಮ ಸಂಸದೀಯ ಪಟು ಜೆ.ಸಿ.ಮಾಧುಸ್ವಾಮಿ ಪರ ಯಾವ ಜಾತಿ ಮುಖಂಡರು ಲಾಬಿ ಮಾಡುತ್ತಿಲ್ಲ. ಬದಲಾಗಿ ಅವರಿಗೆ ಮೆರಿಟ್ ಕೋಟಾದಲ್ಲಿ ಸ್ಥಾನ ಒಲಿಯುವ ನಿರೀಕ್ಷೆಗಳಿವೆ. ಇನ್ನೂ ಸಂಘ ಪರಿವಾರದ ಕೃಪೆ ಹೊಂದಿರುವ ಬಿ.ಸಿ.ನಾಗೇಶ್ ಕೂಡ ರೇಸ್‌ನಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net