ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಪ್ರತಿಭಟನೆ : ಕೊಳ್ಳೇಗಾಲದಲ್ಲಿ ಉಪ್ಪಾರ ಸಮಾಜದ ಮುಖಂಡರ ಆಕ್ರೋಶ
Published on:
Copied
Follow Us
ಚಾಮರಾಜನಗರ : ಚಾಮರಾಜನಗರ ಕ್ಷೇತ್ರದ ಶಾಸಕ ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಉಪ್ಪಾರ ಸಮಾಜದ ಮುಖಂಡರು ಹಾಗೂ ಯುವಕರು ಶನಿವಾರ ಪ್ರತಿಭಟನೆ ನಡೆಸಿದರು.
ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದಲ್ಲಿ ಗ್ರಾಪಂ ಸದಸ್ಯ ಹಾಗೂ ಉಪ್ಪಾರ ಮುಖಂಡ ರಾಚಪ್ಪಾಜಿ ನೇತೃತ್ವದಲ್ಲಿ ನೂರಾರು ಯುವಕರು ಪ್ರತಿಭಟಿಸಿ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಉಪ್ಪಾರ ಸಮುದಾಯದಿಂದ ಸಿ.ಪುಟ್ಟರಂಗಶೆಟ್ಟಿ ಶಾಸಕರಾಗಿದ್ದಾರೆ. ಉಪ್ಪಾರ ಸಮುದಾಯ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ತುಂಬ ಹಿಂದುಳಿದಿದೆ. ಇದನ್ನು ಪರಿಗಣಿಸಿ ಸಚಿವ ಸ್ಥಾನ ನೀಡಬೇಕಿತ್ತು. ನಮ್ಮ ಸಮುದಾಯದ ಶಕ್ತಿಯಾಗಿ ಪುಟರಂಗಶೆಟ್ಟಿ ಅವರ ನೇತೃತ್ವದಲ್ಲಿ ಸುಧಾರಣೆ ಆಗುವ ಭರವಸೆ ಇಟ್ಟುಕೊಂಡಿದ್ದೆವು. ಆದರೀಗ ನಂಬಿದ್ದ ಕಾಂಗ್ರೆಸ್ ಸರ್ಕಾರ ನಮ್ಮ ಸಮುದಾಯದ ನಾಯಕನಿಗೆ ಮೋಸ ಮಾಡಿದೆ. ಬಿಜೆಪಿ ಪ್ರಬಲ ಅಭ್ಯರ್ಥಿಯಾದ ವಿ.ಸೋಮಣ್ಣ ಅವರನ್ನು ಸೋಲಿಸಿದ್ದ ಹಾಗೂ ಉಪ್ಪಾರ ಸಮುದಾಯದಲ್ಲಿರುವ ಏಕೈಕ ಶಾಸಕ ಪುಟ್ಟರಂಗಶೆಟ್ಟಿ ಅವರಿಗೆ ಮಂತ್ರಿ ಸ್ಥಾನ ನೀಡದೆ ಅನ್ಯಾಯ ಎಸಗಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ರಾಜ್ಯದಲ್ಲಿ ಸರ್ಕಾರ ಬರಲು ಉಪ್ಪಾರ ಜನಾಂಗದ ಮತದಾರರು ಉತ್ಸುಕತೆಯಿಂದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ. ಆದ್ದರಿಂದ ಪುಟ್ಟರಂಗಶೆಟ್ಟಿ ಅವರಿಗೆ ಮಂತ್ರಿ ಸ್ಥಾನ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಂಟಾಗುವ ಸಮಸ್ಯೆಗಳನ್ನು ಕಾಂಗ್ರೆಸ್ ಪಕ್ಷ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.