ಸಚಿವ ಸೋಮಣ್ಣ ವಿರುದ್ಧ ಆಕ್ರೋಶ

dav
ಯಳಂದೂರು ಪಟ್ಟಣದ ಎಸ್‌ಬಿಐ ವೃತ್ತದ ಬಳಿ ರೈತ ಸಂಘದ ಸದಸ್ಯರು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಹೊನ್ನೂರು ಪ್ರಕಾಶ್, ಸಿದ್ದಲಿಂಗಸ್ವಾಮಿ, ಮೆಳ್ಳಹಳ್ಳಿ ಚಂದ್ರಶೇಖರ್ ಮೂರ್ತಿ, ಅಂಬಳೆ ಶಿವಕುಮಾರ್, ಗೌಡಹಳ್ಳಿ ಸೋಮಣ್ಣ, ವೀರಣ್ಣ, ಆಲ್ಕೆರೆ ಅಗ್ರಹಾರ ನಾಗರಾಜು, ರಂಗಸ್ವಾಮಿ, ಪುಟ್ಟರಾಜು, ನಂಜುಂಡಸ್ವಾಮಿ, ಸಂತೋಷ್ ಇದ್ದರು.
Published on

ರೈತರೊಂದಿಗೆ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದ ಹಿನ್ನೆಲೆ

ಯಳಂದೂರು: ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ರೈತರೊಂದಿಗೆ ಸಭೆ ನಡೆಸಿ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದ್ದಾರೆ ಎಂದು ಆರೋಪಿಸಿ ರೈತ ಸಂಘದ ಸದಸ್ಯರು ಮಂಗಳವಾರ ರಸ್ತೆ ಸಂಚಾರ ತಡೆದು ಪ್ರತಿಭಟಿಸಿದರು.

ಪಟ್ಟಣದ ಎಸ್‌ಬಿಐ ವೃತ್ತದ ಬಳಿ ಜಮಾಯಿಸಿದ ಸದಸ್ಯರು, ಸುಮಾರು ಅರ್ಧ ಗಂಟೆ ರಸ್ತೆ ಸಂಚಾರಕ್ಕೆ ತಡೆಯೊಡ್ಡಿದರು. ವಿ.ಸೋಮಣ್ಣ ರೈತರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ರೈತರ ಸಮಸ್ಯೆ ಆಲಿಸುವ ಸಲುವಾಗಿ ಸಭೆ ನಡೆಸಿ ಎಂದು ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ. ಇತ್ತೀಚೆಗೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾರೆ. ನಂತರ ತಾನು ಏನೂ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ವಿಡಿಯೋದಲ್ಲಿ ಈ ಸತ್ಯ ಎಲ್ಲರಿಗೂ ಕಾಣುತ್ತಿದೆ. ಮಹಿಳೆಯರ ಬಗ್ಗೆ ಇವರಿಗೆ ಕಿಂಚಿತ್ತೂ ಗೌರವವಿಲ್ಲ. ಈ ಬಗ್ಗೆ ವಿರೋಧ ಪಕ್ಷದವರೂ ಕೂಡ ಸೋಮಣ್ಣ ಏನೂ ತಪ್ಪು ಮಾಡಿಲ್ಲ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಕಿಡಿಕಾರಿದರು.

ಸೋಮಣ್ಣ ಹೊರತುಪಡಿಸಿ ಜಿಲ್ಲೆಗೆ ಅರಣ್ಯ, ವಿದ್ಯುತ್, ಕೃಷಿ, ನೀರಾವರಿ ಸಚಿವರೊಂದಿಗೆ ಕೂಡಲೇ ಮುಖ್ಯಮಂತ್ರಿ ಸಭೆ ನಡೆಸಿ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು. ಜತೆಗೆ ಸೋಮಣ್ಣ ಅವರನ್ನು ಸಚಿವ ಸ್ಥಾನದಿಂದ ಉಚ್ಚಾಟಿಸಬೇಕು. ನ.7ರೊಳಗೆ ಹೊಸ ಉಸ್ತುವಾರಿ ಸಚಿವರನ್ನು ನೇಮಿಸಬೇಕು. ಇಲ್ಲವಾದಲ್ಲಿ ಜಿಲ್ಲಾ ಕೇಂದ್ರದಲ್ಲಿ ನಿರಂತರವಾಗಿ ಪ್ರತಿಭಟನೆ ಹಮ್ಮಿಕೊಳ್ಳುವುದರ ಜತೆಗೆ ಬೆಂಗಳೂರಿಗೆ ಪಾದಯಾತ್ರೆ ಮಾಡಲಾಗುವುದು ಎಂದು ಘೋಷಿಸಿದರು.

ಅಣಗಳ್ಳಿ ಬಸವರಾಜು ಹೋರಾಟದ ವಿರುದ್ಧ ಮಾತನಾಡುತ್ತಿದ್ದಾರೆ. ಅವರನ್ನು ರೈತ ಸಂಘದಿಂದ 10 ವರ್ಷಗಳ ಹಿಂದೆಯೇ ಉಚ್ಚಾಟನೆ ಮಾಡಲಾಗಿದೆ. ಇವರು ಕಾರ್ಖಾನೆ ಮಾಲೀಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ರೈತರ ಬಗ್ಗೆ ನಿಜವಾದ ಕಾಳಜಿ ಇಲ್ಲ. ಇಂತಹ ಹೇಳಿಕೆಗಳು ರೈತ ವಿರೋಧಿಯಾಗಿವೆ ಎಂದರು.

ಸಂಘದ ತಾಲೂಕು ಅಧ್ಯಕ್ಷ ಸಿದ್ದಲಿಂಗಸ್ವಾಮಿ, ಮುಖಂಡರಾದ ಮೆಳ್ಳಹಳ್ಳಿ ಚಂದ್ರಶೇಖರ್ ಮೂರ್ತಿ, ಅಂಬಳೆ ಶಿವಕುಮಾರ್, ಗೌಡಹಳ್ಳಿ ಸೋಮಣ್ಣ, ವೀರಣ್ಣ, ಆಲ್ಕೆರೆ ಅಗ್ರಹಾರ ನಾಗರಾಜು, ರಂಗಸ್ವಾಮಿ, ಪುಟ್ಟರಾಜು, ನಂಜುಂಡಸ್ವಾಮಿ, ಸಂತೋಷ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net