

ರಾಮನಗರ: ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮತ್ತೆ ಗಂಡಸ್ತನ ಮಾತುಗಳು ಹರಿದಾಡಿದ್ದು ರಾಜಕೀಯ ನಾಯಕರ ನಡುವಿನ ಜಂಗೀ ಕುಸ್ತಿಗೆ ಕಾರಣವಾಗಿದೆ.
ಮೇಕೆದಾಟು ಯೋಜನೆ ಜಾರಿ ಮಾಡುವ ಗಂಡಸುತನ ಇರೋದು ಬಿಜೆಪಿಗೆ ಮಾತ್ರ, ಕಾಂಗ್ರೆಸ್ ಪಕ್ಷಕ್ಕೆ ಇದನ್ನೆಲ್ಲ ಅನುಷ್ಠಾನಗೊಳಿಸುವ ಶಕ್ತಿಯೇ ಇಲ್ಲ. ಈ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ಅವರಿಗೆ ಈ ಪೌರುಷವಿದೆಯಾ? ಎನ್ನುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಸವಾಲು ಹಾಕಿದ್ದಾರೆ.
ಜಾನಪದ ಲೋಕದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 7 ಬಾರಿ ಶಾಸಕರಾಗಿ, ಮೊದಲ ಬಾರಿಗೆ ಶಾಸಕರಾದಾಗ ಮಂತ್ರಿಯೂ ಆಗಿದ್ದ, ನಂತರ ಹಲವು ಬಾರಿ ಮಂತ್ರಿಯಾಗಿ ಮಹತ್ವದ ಖಾತೆಗಳನ್ನು ನಿಭಾಯಿಸಿರುವ ಡಿ.ಕೆ. ಶಿವಕುಮಾರ್ ಹಾಗೂ ಎರಡು ಬಾರಿ ಸಂಸದರಾಗಿರುವ ಡಿ.ಕೆ. ಸುರೇಶ್, ಇಷ್ಟು ವರ್ಷಗಳಲ್ಲಿ ಜಿಲ್ಲೆಗೆ ನೀಡಿದ ಕೊಡುಗೆ ಏನು? ಜಿಲ್ಲೆಯಲ್ಲಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿ, ಸಂಪನ್ಮೂಲವನ್ನು ಲೂಟಿ ಹೊಡೆದಿರುವುದನ್ನು ಬಿಟ್ಟರೆ ಇವರೇನು ಮಾಡಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ 2013ರಿಂದ 2018ರವರೆಗೆ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿತ್ತು. ಈ ವೇಳೆ ಮೇಕೆದಾಟು ಯೋಜನೆ ಸಂಬಂಧ ಒಂದು ಕಾರ್ಯಸಾಧ್ಯತಾ ವರದಿಯನ್ನಾಗಲೀ, ಡಿಪಿಆರ್ ರನ್ನೂ ಸಿದ್ಧಪಡಿಸಲು ಆಗಲಿಲ್ಲ. 4ಜಿ ವಿನಾಯಿತಿ ಪಡೆಯಲು ಸಿದ್ದರಾಮಯ್ಯ ಮೂರು ವರ್ಷ ತೆಗೆದುಕೊಂಡರು. ಆ ಅವಧಿಯಲ್ಲಿ ರಾಜ್ಯಕ್ಕೆ ಯಾವ ಅಡೆತಡೆಗಳೂ ಇರಲಿಲ್ಲ. ಇದಕ್ಕೂ ಮೊದಲು ಕೇಂದ್ರದಲ್ಲಿದ್ದ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಾವೇರಿ ವಿವಾದದ ಅಂತಿಮ ತೀರ್ಪನ್ನು 6 ವರ್ಷಗಳಾದರೂ ಗೆಜೆಟ್ಟಿನಲ್ಲೇಕೆ ಪ್ರಕಟಿಸಲಿಲ್ಲ? ಮುಂಬರುವ ದಿನಗಳಲ್ಲಿ ಕಾಂಗ್ರೆಸ್ಸನ್ನು ನಾವು ರಾಜಕೀಯವಾಗಿ ಬೆತ್ತಲು ಮಾಡಲಿದ್ದೇವೆ ಎಂದು ಸಚಿವರು ಹೇಳಿದರು.
ಯೋಜನೆ ಜಾರಿಗೆ ಬಿಜೆಪಿ ಸಂಪೂರ್ಣ ಬದ್ಧ
ಮೇಕೆದಾಟು ಯೋಜನೆಯ ಜಾರಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ಬದ್ಧತೆ ಹೊಂದಿದ್ದು, ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಈ ವಿಚಾರ ಈಗ ನ್ಯಾಯಾಲಯದಲ್ಲಿದೆ. ನಾಡು-ನುಡಿಯ ವಿಚಾರದಲ್ಲಿ ರಾಜ್ಯ ಮೊದಲು ಎನ್ನುವುದು ಬಿಜೆಪಿ ನಿಲುವಾಗಿದೆ. ನಮ್ಮ ಪಕ್ಷದ ಸರ್ಕಾರ ಬಂದಮೇಲೆ ಎನ್‌ಜಿಟಿ ತಡೆಯಾಜ್ಞೆ ತೆರವುಗೊಳಿಸಲಾಗಿದೆ. ಜತೆಗೆ ಮುಳುಗಡೆಯಾಗಲಿರುವ 5 ಸಾವಿರ ಎಕರೆ ಅರಣ್ಯ ಭೂಮಿಗೆ ಪರ್ಯಾಯವಾಗಿ ನೀಡಲು ರಾಮನಗರ, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಈಗಾಗಲೇ 7,500 ಎಕರೆಯನ್ನು ಗುರುತಿಸಲಾಗಿದೆ. ಇದನ್ನೆಲ್ಲ ಕಾಂಗ್ರೆಸ್ ಸರ್ಕಾರ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಹಿಂದೆ 2008-13ರಲ್ಲಿ ಬಿಜೆಪಿ ಸರ್ಕಾರವಿದ್ದಾಗಲೂ ಕಾವೇರಿ ಕಣಿವೆಯ ವ್ಯಾಪ್ತಿಯಲ್ಲಿ ಸಾವಿರಾರು ಕೋಟಿ ಮೊತ್ತದ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿತು. 60 ವರ್ಷ ರಾಜ್ಯವನ್ನು ಆಳಿರುವ ಕಾಂಗ್ರೆಸ್ ಮಾಡಿರುವುದೇನು? ಎಂದು ಅಶ್ವತ್ಥನಾರಾಯಣ ಪ್ರಶ್ನಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲುವಾಡಿ ದೇವರಾಜ್, ಎಂಎಲ್‌ಸಿ ಪುಟ್ಟಣ್ಣ, ಮಾಜಿ ಶಾಸಕ ಸಿದ್ಧರಾಜು, ಅಶ್ವತ್ಥನಾರಾಯಣ, ಮುಖಂಡರಾದ ಕೇಶವಪ್ರಸಾದ್, ಮುರಳಿಧರ್ ಮತ್ತಿತರರು ಇದ್ದರು.
ಕರೊನಾ ನಿಯಮ ಉಲ್ಲಂಸಿದ ಎಲ್ಲರ ವಿರುದ್ಧ ಪ್ರಕರಣ
ಕಾಂಗ್ರೆಸ್ ಪಕ್ಷ ಸಾಂಕ್ರಾಮಿಕ ರೋಗ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಗಳನ್ನು ಉಲ್ಲಂಘಿಸಿ ಪಾದಯಾತ್ರೆ ನಡೆಸುತ್ತಿದೆ. ಇವೆರಡೂ ಜಾಮೀನುರಹಿತ ಅಪರಾಧಗಳಾಗಿವೆ. ಸರ್ಕಾರವು ಕಾನೂನು ಮತ್ತು ಸುವ್ಯವಸ್ಥೆ ಮೇಲೆ ನಿಗಾ ಇಟ್ಟಿದೆ. ಪರಿಸ್ಥಿತಿ ಬಿಗಡಾಯಿಸಿದರೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು. ಅಲ್ಲದೆ, ಬೇರೆ ಕಡೆಗಳಲ್ಲಿ ನಮ್ಮ ಪಕ್ಷದ ನಾಯಕರು ಪಾಲ್ಗೊಂಡ ಕಾರ್ಯಕ್ರಮಗಳಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಆಗಿದ್ದಲ್ಲಿ ಅವರ ಮೇಲೂ ಪ್ರಕರಣ ದಾಖಲಾಗುತ್ತದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.
ಡಿಕೆಶಿ - ಸಿದ್ದರಾಮಯ್ಯ ನಡುವೆ ಸಿಎಂ ಕುರ್ಚಿ ಪಾದಯಾತ್ರೆ
ಪಾದಯಾತ್ರೆ ಮೂಲಕ ಜನರಿಗೆ ಕೋವಿಡ್ ಹರಡುತ್ತಿರುವ ಕಾಂಗ್ರೆಸ್‌ನವರು, ಪಾದರಾಯನಪುರ ಗಲಭೆಕೋರರನ್ನು ರಾಮನಗರ ಜೈಲಿಗೆ ತಂದಾಗ ನಾಲ್ಕು ಮಂದಿಗೆ ಸೋಂಕು ತಗುಲಿದ್ದಕ್ಕೆ ಬೊಬ್ಬೆ ಹೊಡೆದರು. ಇದೀಗ ಇವರ ಸಿಎಂ ಕುರ್ಚಿ ಪಾದಯಾತ್ರೆ ರಾಜಕಾರಣಕ್ಕೆ ಜನತೆ ಬಲಿಯಾಗುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಈಗ ಮೇಕೆದಾಟು ಜ್ಞಾನೋದಯವಾಗಿದೆ, ಈ ವಿಚಾರವಾಗಿ ಏಕೆ ಅವರು ಸದನದ ಬಾವಿಯಲ್ಲಿ ಧರಣಿ ಮಾಡಲಿಲ್ಲ? ಏಕೆ ಮೇಕೆದಾಟು ವಿಚಾರವಾಗಿ ಪ್ರಶ್ನೆ ಕೇಳಲಿಲ್ಲ. ಈಗ ಮಾಡುತ್ತಿರುವುದು ಕೇವಲ ಸಿಎಂ ಕುರ್ಚಿಗೆ ನಾನಾ, ಸಿದ್ದರಾಮಯ್ಯನ ಎನ್ನುವ ಸ್ಪರ್ಧೆಯ ಪಾದಯಾತ್ರೆ ಎಂದು ಅಶ್ವತ್ಥನಾರಾಯಣ ಮೂದಲಿಸಿದರು.
ದೆಹಲಿಯಲ್ಲಿ ಗಂಡಸ್ತನ ತೋರಿಸಲಿ
ಬಿಜೆಪಿಯವರು ಮೇಕೆದಾಟು ಯೋಜನೆಯನ್ನು ಅನುಷ್ಠಾನ ಮಾಡುವ ಮೂಲಕ ಅವರ ಗಂಡಸುತನ ತೋರಿಸಲಿ ಎಂದು ಸಂಸದ ಡಿ.ಕೆ. ಸುರೇಶ್ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರಿಗೆ ತಿರುಗೇಟು ನೀಡಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಗಂಡಸರು ಎಂದು ತೋರಿಸಲು ಮೊದಲು ಯೋಜನೆಯನ್ನು ಅನುಷ್ಠಾನ ಮಾಡಲಿ, ಕೇಂದ್ರದ ಮೇಲೆ ಗಂಡಸ್ತನ ತೋರಿಸಿ ಎಂದೇ ನಾನು ಹೇಳಿದ್ದು, ಒಂದು ವೇಳೆ ಅವರು ಯೋಜನೆ ಅನುಷ್ಠಾನ ಮಾಡಿದರೆ ನಾನು ಪಾದಪೂಜೆ ಮಾಡಿ ಕನಕಪುರಕ್ಕೆ ಸ್ವಾಗತ ಮಾಡುತ್ತೇನೆ, ಯೋಜನೆಯನ್ನು ಅನುಷ್ಠಾನ ಮಾಡಲಿ ಎನ್ನುವುದೇ ನಮ್ಮ ಒತ್ತಾಯವಾಗಿದೆ ಎಂದು ಹೇಳಿದರು.
ನೀರಿಗಾಗಿ, ರಾಜ್ಯದ ರೈತರಿಗಾಗಿ ನಡಿಗೆಯನ್ನು ಮಾಡುತ್ತಿದ್ದೇವೆ, ರಾಜಕಾರಣಕ್ಕಾಗಿ ಅಲ್ಲ. ನಮ್ಮ ಗಂಡಸ್ತನ ಕೇಳುವವರು ದೆಹಲಿಯಲ್ಲಿ ತೋರಿಸಲಿ, ನಮ್ಮ ಗಂಡಸ್ತನದ ಬಗ್ಗೆ ನಮಗೆ ಅನುಮಾನ ಇಲ್ಲ, ಅವರಿಗೆ ಇದೆಯೋ ಇಲ್ಲವೋ ದೆಹಲಿಯಲ್ಲಿ ತೋರಿಸಲಿ, ಪ್ರಧಾನಿ ಬಳಿ ಹೋಗಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಚರ್ಚೆ ಮಾಡಲಿ, ಅನುಮೋದನೆ ಮಾಡಿಸಲಿ. ಒಂದು ವೇಳೆ ಯೋಜನೆ ಜಾರಿಗೆ ಪ್ರಧಾನಿಯೇ ಬಂದರೆ ಅವರಿಗೆ ಭವ್ಯ ಸ್ವಾಗತ ಕೋರುತ್ತೇನೆ ಎಂದರು.
ಗಂಡಸ್ತನದ ವಿಚಾರ ಅವರೇ ಮಾತನಾಡಿದ್ದು, ಗಂಡಸರು ಆದವರು ಗಂಡಸ್ತನ ಪರೀಕ್ಷೆ ಮಾಡಿಕೊಳ್ಳಲು ಹೋಗಲ್ಲ, ಅವರು ಯಾವ ರೀತಿ ಪರೀಕ್ಷೆ ಮಾಡುತ್ತಾರೆ ಎಂದು ನನಗೆ ಗೊತ್ತಿಲ್ಲ. ಬಿಜೆಪಿಯವರಲ್ಲಿ ಪರೀಕ್ಷೆ ಮಾಡುವವರ ಸಂಖ್ಯೆ ಜಾಸ್ತಿ ಇರಬಹುದು ಎಂದು ವ್ಯಂಗವಾಡಿದರು. ಅಶ್ವತ್ಥ ನಾರಾಯಣ ಅವರು ಮಂತ್ರಿಗಿರಿ ಉಳಿಸಿಕೊಳ್ಳಲು ರಾಮನಗರಕ್ಕೆ ಬಂದು ಸುದ್ದಿಗೋಷ್ಠಿ ಮಾಡಿ ಹೋಗಿದ್ದಾರೆ ಎಂದು ಟೀಕಿಸಿದರು.