ಸಚಿವ ಸಂಪುಟಕ್ಕೂ ಮುನ್ನಾ ರೈತರ ಸಭೆ ಕರೆಯಿರಿ

Published on

ಚಾಮರಾಜನಗರ : ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿನಿಗದಿಯಾಗಿರುವ ರಾಜ್ಯ ಸಚಿವ ಸಂಪುಟ ಸಭೆಗೂ ಮುನ್ನಾ ರೈತರ ಸಭೆಯನ್ನು ಕರೆಯಬೇಕು. ಇಲ್ಲವಾದರೇ ಟ್ರ್ಯಾಕ್ಟರ್ ರ‌್ಯಾಲಿ ಮೂಲಕ ಮಹದೇಶ್ವರ ಬೆಟ್ಟಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ರೈತರ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯ ಸರ್ಕಾರ ಜಿಲ್ಲೆಯ ಶ್ರೀಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆಯನ್ನು ಆಯೋಜನೆ ಮಾಡಿರುವುದು ಅತ್ಯಂತ ಸ್ವಾಗತಾರ್ಹ. ಆದರೇ ಸಭೆ ಆಯೋಜನೆಗೂ ಮುನ್ನಾ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ರೈತರ ಸಮಸ್ಯೆಗಳನ್ನು ಚರ್ಚಿಸುವ ಸಂಬಂಧ ಸಭೆ ಕರೆಯಬೇಕಿತ್ತು. ರೈತರ ಕುಂದುಕೊರತೆಗಳನ್ನು ಕೇಳದೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.

ರಾಜ್ಯಸರ್ಕಾರ ಒಂದು ಕಡೆ ರೈತರಿಗೆ ನಿರಂತರವಾಗಿ ವಿದ್ಯುತ್ ಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ರೈತರು ಇಂದಿಗೂ ವಿದ್ಯುತ್ ಸಮಸ್ಯೆ ಅನುಭವಿಸುತ್ತಿದ್ದಾರೆ. ಗೃಹ ಜ್ಯೋತಿಯಲ್ಲಿ ಉಚಿತ ವಿದ್ಯುತ್ ಕೊಡುತ್ತೇವೆ ಎನ್ನುತ್ತಾರೆ, ಆದರೇ ಇಂದಿಗೂ ಗ್ರಾಮೀಣ ಭಾಗದ ಶೇ.10 ರಷ್ಟು ಜನರಿಗೆ ಸೌಲಭ್ಯ ದೊರೆಯುತ್ತಿಲ್ಲ. ಕಳೆದ ಸಾಲಿನಲ್ಲಿ ಕಬ್ಬಿನ ಬಾಕಿಮೊತ್ತ 950 ಕೋಟಿ ರೂ, ಗಳನ್ನು ಬಿಡುಗಡೆ ಮಾಡಿಲ್ಲ. ಸುಮಾರು 850 ಕೋಟಿ ರೂ, ಹಾಲಿನ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಿಲ್ಲ. ಈ ಸಮಸ್ಯೆಗಳು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಬೇಕಾದರೇ, ರೈತರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಸಭೆ ಕರೆದು ಚರ್ಚಿಸಬೇಕು ಎಂದು ಒತ್ತಾಯಿಸಿದರು.

ಮಲೆ ಮಹದೇಶ್ವರ ಬೆಟ್ಟದಲ್ಲಿ ಆಯೋಜಿಸಿರುವ ಸಚಿವ ಸಂಪುಟ ಸಭೆಗೂ ಮುನ್ನಾ ರೈತರೊಂದಿಗೆ ಸಭೆ ನಡೆಸಬೇಕು. ಇಲ್ಲವಾದರೇ ಮಲೆ ಮಹದೇಶ್ವರ ಬೆಟ್ಟಕ್ಕೆ ರೈತರು ಟ್ರ್ಯಾಕ್ಟರ್ ರ‌್ಯಾಲಿ ನಡೆಸುವ ಮೂಲಕ ಬೃಹತ್ ಹೋರಾಟ ನಡೆಸುವ ಮೂಲಕ ಪ್ರತಿರೋಧ ತೋರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಮಲೆಯೂರು ಪ್ರವೀಣ್, ಅರಳೀಕಟ್ಟೆ ಕುಮಾರ್, ಪ್ರಭು, ಪ್ರಕಾಶ್ ಗಾಂಧಿ, ಜನ್ನೂರು ಶಾಂತರಾಜು, ಹೊನ್ನಳ್ಳಿ ಬಸವಣ್ಣ, ಶ್ರೀಕಂಠ ಸ್ವಾಮಿ, ನಂದೀಶ್, ಮಲೆಯೂರು ಸಿದ್ದರಾಜು, ಮಹಾದೇವಮ್ಮ, ಬಸವರಾಜು, ಶಿವಕುಮಾರ್, ರಾಜು ಗೌಡ ಹಾಗೂ ಇತರರು ಹಾಜರಿದ್ದರು.

ಜಿಲ್ಲಾ ಕೇಂದ್ರದಲ್ಲೂ ಮುತ್ತಿಗೆ:

ಆನ್ಲೇನ್ ಗೇಮ್ ಮತ್ತು ರಮ್ಮಿಗಳಿಂದ ಸಾಮಾನ್ಯ ಜನರು ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ. ಯುವಕರು ನಿರಂತರವಾಗಿ ಸಮಸ್ಯೆ ಅನುಭವಿಸುವಂತಾಗಿದೆ. ಮೈಕ್ರೋ ಫೈನಾನ್ಸ್‌ಗಳಿಂದ ಕುಟುಂಬಗಳು ಗ್ರಾಮಗಳನ್ನು ತೊರೆಯುತ್ತಿದ್ದಾರೆ. ರೈತರು ನಿರಂತರವಾಗಿ ಸಮಸ್ಯೆಗೆ ಸಿಲುಕಿದ್ದು, ರಾಜ್ಯ ಸರ್ಕಾರ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರದಲ್ಲಿ ೆ.16 ರಂದು ಆಯೋಜಿಸಲಾಗಿರುವ ಫಲಾನುಭವಿಗಳ ಸಮಾವೇಶಕ್ಕೂ ಮುತ್ತಿಗೆ ಹಾಕಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರೈತರ ಹಲವಾರು ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net