ಸಚಿವ ಸಂಪುಟ ಸಭೆಯಲ್ಲಿ ರೈತರ ಸಮಸ್ಯೆಗಳ ಈಡೇರಿಸಿ

Badagalapura Ngendra
Published on

ಚಾಮರಾಜನಗರ: ಮುಂದಿನ ತಿಂಗಳಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಮುಖ್ಯಮಂತ್ರಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ರೈತರ ಸಮಸ್ಯೆಗಳನ್ನು ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.

ಹನೂರು ತಾಲೂಕಿನ ಮಹದೇಶ್ವರ ಬೆಟ್ಟದಲ್ಲಿ ಜನವರಿ ಮೊದಲ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಚಿವ ಸಂಪುಟ ಸಭೆ ನಡೆಸುತ್ತಿರುವುದು ಅತ್ಯಂತ ಸ್ವಾಗತಾರ್ಹ. ಆದರೇ ಈ ಸಭೆಯನ್ನು ಕೇವಲ ಕಾಟಾಚಾರಕ್ಕೆ ನಡೆಸದೇ, ಈ ಭಾಗದ ಕಾಡಂಚಿನ ಜನರು ಹಾಗೂ ರೈತಾಪಿವರ್ಗದ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸಬೇಕಿದೆ. ಈ ನಿಟ್ಟಿನಲ್ಲಿ ರೈತರ ಬೇಡಿಕೆಗಳಾದ ಫಸಲ್ ಭೀಮಾ ಯೋಜನೆಯನ್ನು ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೂ ವರ್ಷಪೂರ್ತಿ ಅನ್ವಯವಾಗುವಂತೆ ಜಾರಿಗೆ ತರಬೇಕು.ವೈಯಕ್ತಿಕ ವಿಮಾ ಪಾಲಿಸಿಯನ್ನು ಎಲ್ಲಾ ಬೆಳೆಗಳಿಗೂ ಜಾರಿಗೊಳಿಸಬೇಕು. ಮಾನವ ವನ್ಯಜೀವಿ ಸಂಘರ್ಷವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು ಎಂದು ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಕರನಿರಾಕರಣೆಯ ಸಂದರ್ಭದಲ್ಲಿ ಉಳಿಸಿಕೊಂಡಿರುವ ಗೃಹ ಬಳಕೆ ವಿದ್ಯುತ್ ಬಾಕಿಯನ್ನು ಸಂಪೂರ್ಣ ಮನ್ನಾ ಮಾಡಬೇಕು. ರೈತರ ಕೃಷಿ ಪಂಪ್‌ಸೆಟ್‌ಗಳ ಅನಧೀಕೃತ ವಿದ್ಯುತ್ ಸಂಪರ್ಕವನ್ನು ಅಧಿಕೃತಗೊಳಿಸಲು ಹಾಗೂ ಹೊಸ ಸಂಪರ್ಕವನ್ನು ಪಡೆಯಲು ರೈತರೆ ಪೂರ್ಣ ವೆಚ್ಚವನ್ನು ಭರಿಸಬೇಕೆಂದು ಹೊರಡಿಸಿರುವ ಆದೇಶವನ್ನು ಕೂಡಲೇ ಕೈಬಿಟ್ಟು ಸಾಂಕೇತಿಕ ಮೊತ್ತವನ್ನು ಪಡೆದು ಸಂಪರ್ಕವನ್ನು ಕಲ್ಪಿಸಬೇಕು ಎಂದು ತಿಳಿಸಿದರು.

ಕೃಷಿ ಉತ್ಪನ್ನಗಳಿಗೆ ಸ್ವಾಮಿನಾಥನ್ ವರದಿಯನ್ವಯ ಕನಿಷ್ಠ ಬೆಂಬಲ ಬೆಲೆಯನ್ನು ನೀಡಿ ಎಲ್ಲಾ ಬೆಳೆಗಳನ್ನು ಸಕಾಲದಲ್ಲಿ ಖರೀದಿಸಬೇಕು. ಕಳೆದ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು ಕೊಡಬೇಕಾಗಿರುವ ಉಪ ಉತ್ಪನ್ನಗಳ ಬಾಕಿ ಹಣ ಪಾವತಿ ಹಾಗೂ ಟನ್ ಕಬ್ಬಿಗೆ 5000 ರೂ. ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ಹನೂರು ಭಾಗದ ಕೆರೆಗಳಿಗೆ ನದಿಮೂಲದಿಂದ ನೀರು ತುಂಬಿಸಬೇಕು. ಜಿಲ್ಲೆಯ ವ್ಯಾಪ್ತಿಯಲ್ಲಿ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಸಾಗುವಾನಿ ಮರಗಳ ಕಟಾವಿಗೆ ಅನುಮತಿ ನೀಡಬೇಕು. ಕಳೆದ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕೊಡಬೇಕಿರುವ ಉಪ ಉಪಉತ್ಪನ್ನಗಳ ಬಾಕಿ ಮೊತ್ತವನ್ನು ಜಮಾಗೊಳಿಸಬೇಕು. ಈ ಸಾಲಿನ ಕಬ್ಬಿಗೆ ಟನ್‌ಗೆ 5000 ರೂ, ದರ ನಿಗದಿಮಾಡಬೇಕು ಎಂದು ಹೇಳಿದರು.

ಗೋಷ್ಠಿಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎ.ಎಲ್.ಕೆಂಪುಗೌಡ, ವಿಭಾಗೀಯ ಕಾರ್ಯದರ್ಶಿ ಸಿ.ಸಿದ್ದರಾಜು, ಖಾಯಂ ಸದಸ್ಯ ಹೆಬ್ಬಸೂರು ಬಸವಣ್ಣ, ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ, ಪ್ರಧಾನ ಕಾರ್ಯದರ್ಶಿ ಸಿ.ಭಾಸ್ಕರ್, ಕಾರ್ಯಾಧ್ಯಕ್ಷ ಶೈಲೇಂದ್ರ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net