

ಕಲಬುರಗಿ: ಕಲ್ಯಾಣ ಕರ್ನಾಟಕದ ಅಮೃತ ಮಹೋತ್ಸವದ ನಿಮಿತ್ತ ಕಲಬುರಗಿಯಲ್ಲಿ ವಿಧಾನ ಮಂಡಲ ಅಧಿವೇಶನ ಮತ್ತು ಸಚಿವ ಸಂಪುಟ ಸಭೆ ಆಯೋಜಿಸಬೇಕು ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷಣ ದಸ್ತಿ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೩೭೧(ಜೆ) ಜಾರಿಯಾಗಿ ದಶಕ ಕಂಡಿದೆ. ಸಂವಿಧಾನದ ವಿಶೇಷ ಸ್ಥಾನಮಾನ ಪಡೆದಿರುವ ಈ ಭಾಗದ ರಚನಾತ್ಮಕ, ಸರ್ವಾಂಗೀಣ ಅಭಿವೃದ್ಧಿ, ಪ್ರಾದೇಶಿಕ ಅಸಮತೋಲನ ನಿವಾರಣೆ, ೩೭೧(ಜೆ) ಪರಿಣಾಮಕಾರಿ ಅನುಷ್ಠಾನ ಸೇರಿದಂತೆ ಕಲ್ಯಾಣದ ಜ್ವಲಂತ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆ ನಡೆಯಬೇಕಿದೆ. ಚರ್ಚೆಯದ ನಂತರ ನಿರ್ಣಯ ಕೈಗೊಳ್ಳಲು ಕಲ್ಯಾಣದ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ಈ ಸಾಲಿನಲ್ಲಿ ಒಂದು ವಾರದ ಅಧಿವೇಶನ ನಡೆಸಬೇಕು. ಪ್ರತಿ ವರ್ಷ ಎರಡು ಸಚಿವ ಸಂಪುಟ ಸಭೆ ನಡೆಸಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ನಿಮಿತ್ತ ಮುಖ್ಯಮಂತ್ರಿಗಳನ್ನು ಆಹ್ವಾನಿಸಿರುವುದು ಸ್ವಾಗತಾರ್ಹ. ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಅವರು ಇಡಿ ವರ್ಷ ಉತ್ಸವ ಆಚರಣೆಗೆ ಮುಂದಾಗಿರುವುದು ಸಂತಸದ ಸಂಗತಿ ಎಂದರು.
ಈ ಭಾಗ ಜಗತ್ತಿಗೆ ಬಸವಾದಿ ಶರಣರ ನೇತೃತ್ವದಲ್ಲಿ ಪಾರ್ಲಿಮೆಂಟ್ ನೀಡಿದೆ. ಕನ್ನಡ ಲೋಕಕ್ಕೆ ಕವಿರಾಜಮಾರ್ಗ ಮಹಾಗ್ರಂಥ ನೀಡಿದೆ. ಜಗತ್ತಿಗೆ ಹಿಂದೂ ಶಾಸನ ನೀಡಿದರೆ, ವಿಶ್ವಕ್ಕೆ ವಚನ, ದಾಸ ಮತ್ತು ಸೂಫಿ ಸಾಹಿತ್ಯ ನೀಡಿದ ಕಲ್ಯಾಣ ಕರ್ನಾಟಕ ಬೌದ್ಧ, ಜೈನ್, ಸಿಖ್ ಪರಂಪರೆ ಮೆರೆದ ನಾಡು ಎಂದರು.
ಪ್ರೊ.ಆರ್.ಕೆ.ಹುಡಗಿ, ಡಾ.ಬಸವರಾಜ ಕುಮ್ನೂರು, ಮನೀಷ್ ಜಾಜು, ಡಾ.ಮಾಜೀದ್ ಡಾಗಿ, ಲಿಂಗರಾಜ ಸಿರಗಾಪೂರ್, ಜ್ಱಆನಮಿತ್ರ ಸ್ಯಾಮ್ಯುವೆಲ್, ಅಬ್ದುಲï ರಹೀಂ, ಅಸ್ಲಂ ಚೌಂಗೆ ಇತರರು ಇದ್ದರು.