ಮೈಸೂರು: ಸರ್ಕಾರಿ ಶಾಲೆಯಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿಷೇಧಿಸುವಂತೆ ಸಿಎಂಗೆ ಪತ್ರ ಬರೆದ ಬಳಿಕ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಬರುತ್ತಿರುವುದು ನಿಜ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಹೇಳಿದರು.
ಅವರಿಗೆ ಜೀವ ಬೆದರಿಕೆ ಒಡ್ಡುವ ಕಿಡಿಗೇಡಿ ಮನಸ್ಥಿತಿಯವರು ಬಿಜೆಪಿ-ಆರ್‌ಎಸ್‌ಎಸ್ ಬೆಂಬಲಿಗರೇ ಆಗಿರುತ್ತಾರೆ. 2014ರ ನಂತರ, ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ರೀತಿಯ ಘಟನೆಗಳಾಗುತ್ತಿವೆ.
ತಮ್ಮ ವಿಚಾರ ಒಪ್ಪದವರಿಗೆ ನಿರಂತರ ತೊಂದರೆ ನೀಡುವ ಮನಸ್ಥಿತಿ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮುಖ್ಯಮಂತ್ರಿಗಳ ನಿವಾಸದಲ್ಲಿ ನಡೆದ ಔತಣಕೂಟದಲ್ಲಿ ಸಂಪುಟ ವಿಸ್ತರಣೆ, ಪುನಾರಚನೆ ಕುರಿತಾಗಲಿ ಚರ್ಚೆ ಆಗಿಲ್ಲ. ಪ್ರತಿ 3-6 ತಿಂಗಳಿಗೊಮ್ಮೆ ಎಲ್ಲ ಸಚಿವರು ಸೇರಿ ಊಟ ಮಾಡುತ್ತೇವೆ. ಸಿಎಂ ನಿವಾಸದಲ್ಲಿ ನಡೆದ ಔತಣಕೂಟದಲ್ಲೂ ಯಾವುದೇ ವಿಶೇಷ ಇರಲಿಲ್ಲ. ಸಂಪುಟ ವಿಸ್ತರಣೆ ಸೇರಿದಂತೆ ಯಾವ ವಿಷಯವೂ ಅಲ್ಲಿ ಚರ್ಚೆ ಮಾಡಲಿಲ್ಲ ಎಂದರು.
ಸಂಪುಟ ಪುನಾರಚನೆ ವಿಚಾರ ಸಿಎಂ ವಿವೇಚನೆಗೆ ಬಿಟ್ಟದ್ದು. ಅವರು ಪಕ್ಷದ ಹೈಕಮಾಂಡ್‌ನೊಂದಿಗೆ ಚರ್ಚಿಸಿ ನಿರ್ಧರಿಸುತ್ತಾರೆ. ಸಿಎಂ ಬದಲಾವಣೆ ಕೇವಲ ಮಾಧ್ಯಮಗಳ ಸೃಷ್ಟಿ. ಸದ್ಯಕ್ಕೆ ಆ ರೀತಿಯ ಯಾವುದೇ ಚರ್ಚೆ ಪಕ್ಷದಲ್ಲಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.