

ಚಿಕ್ಕಮಗಳೂರು: ಸಾರ್ವಜನಿಕ ಹಾಗೂ ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂಬ ಸಚಿವ ಪ್ರಿಯಾಂಕ್ ಖರ್ಗೆ ನಿರ್ಧಾರ ಸ್ವಾಗತಾರ್ಹ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಾಗಡಿ ವಿರೂಪಾಕ್ಷ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ. ಇದೇ ರೀತಿ ಮುಂದುವರಿದರೆ ದಲಿತ ಸಂಘರ್ಷ ಸಮಿತಿಯಿಂದ ಹೋರಾಟ ರೂಪಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ ಅವರು, ಸರ್ಕಾರದಿಂದ ಸಚಿವರಿಗೆ ಝೆಡ್ ಪ್ಲಸ್ ಸೆಕ್ಯೂರಿಟಿ ನೀಡಬೇಕು ಎಂದು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ ಮಾತನಾಡಿ, ಪ್ರಿಯಾಂಕ್ ಖರ್ಗೆ ಸತ್ಯವನ್ನು ಮಾತನಾಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ದೀರ್ಘಕಾಲ ಆಳ್ವಿಕೆ ಮಾಡಿದವರು ಹಾಗೂ ಹಿರಿಯ ನಾಯಕರು ಈ ಬಗ್ಗೆ ಮೌನ ವಹಿಸಿರುವುದು ಅನುಮಾನ ಸೃಷ್ಟಿಸಿದೆ ಎಂದರು.
ಶಾಲಾ-ಕಾಲೇಜುಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳಿಗೆ ಅವಕಾಶ ನೀಡಿದರೆ ದೇಶಭಕ್ತಿಯ ಹೆಸರಲ್ಲಿ ಕೋಮುವಾದ, ಜಾತಿ ಬೇಧ ಬಿತ್ತುವ ಮೂಲಕ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದನ್ನು ಸೂಕ್ಷ್ಮವಾಗಿ ಗ್ರಹಿಸಿ ಪ್ರಿಯಾಂಕ್ ಖರ್ಗೆ ಅವರು ಸೂಕ್ತ ನಿರ್ಧಾರ ತಗೆದುಕೊಂಡಿವುದನ್ನು ದಲಿತ ಸಂಘರ್ಷ ಸಮಿತಿ ಸ್ವಾಗತಿಸುತ್ತದೆ ಎಂದರು.
ಆರ್‌ಎಸ್‌ಎಸ್ ಬೆಂಬಲಿತ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಲುವಾಗಿ ಹಿಂದುತ್ವದ ಹೆಸರಿನಲ್ಲಿ ಮಂಕುಬೂದಿ ಎರಚುತ್ತಿದೆ. ಅಧಿಕಾರದ ಗದ್ದುಗೆ ಹಿಡಿದ ಮೇಲೆ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಎಸ್‌ಎಸ್ ಮುಖಂಡರಾದ ಕುಮಾರ್ ಅಂಬಳೆ, ಪುಟ್ಟಸ್ವಾಮಿ, ಮಂಜುನಾಥ್ ಮತ್ತಿತರರಿದ್ದರು.