ಸಚಿವ ತಂಗಡಗಿಯಿಂದ ಅನಗತ್ಯ ತೊಂದರೆ

Published on

ಕೊಪ್ಪಳ: ಕನಕಗಿರಿ ತಾಲೂಕಿನ ನವಲಿ ಗ್ರಾಮದ ದಲಿತ ಕೇರಿಯಲ್ಲಿ ಮನೆ ನಿರ್ಮಿಸಿಕೊಳ್ಳುತ್ತಿದ್ದು, ಅದಕ್ಕೆ ಸಚಿವ ಶಿವರಾಜ ತಂಗಡಗಿ ತಮ್ಮ ಹಿಂಬಾಲಕರ ಮಾತು ಕಟ್ಟಿಕೊಂಡು ಅಧಿಕಾರಿಗಳ ಮೂಲಕ ಅನಗತ್ಯ ತೊಂದರೆ ಕೊಡಿಸುತ್ತಿದ್ದಾರೆಂದು ಗ್ರಾಮಸ್ಥ ವಿರೇಶ ನಾಗವಂಶಿ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಲಿತ ಕೇರಿಯಲ್ಲಿ 35&40 ಕುಟುಂಬಗಳಿವೆ. ಸರ್ಕಾರಿ ಜಾಗವಾಗಿದ್ದು ಹಲವು ದಶಕಗಳಿಂದ ಅಲ್ಲಿಯೇ ವಾಸವಾಗಿದ್ದೇವೆ. ಹಲವು ಈಗಾಗಲೇ ಮನೆ ಕಟ್ಟಿಕೊಂಡಿದ್ದಾರೆ. ಕಂದಾಯ ಅಧಿಕಾರಿಗಳು ದಾಖಲೆ ಪರಿಶೀಲಿಸಿದ್ದು, ಅದು ಸರ್ಕಾರಿ ಜಾಗವಲ್ಲ. ಮಹಾರ್​ ವಾಡಿ (ದುರ್ಬಲ ವರ್ಗದವರಿಗೆ ಮೀಸಲಾದ) ಜಾಗವೆಂದು ದಾಖಲೆಗಳು ಸಿಕ್ಕಿವೆ. ಆದರೆ, ಸಚಿವ ಶಿವರಾಜ ತಂಗಡಗಿ ಹಿಂಬಾಲಕರಿಬ್ಬರು ದುರುದ್ದೇಶದಿಂದ ನಾನು ಮನೆ ಕಟ್ಟುವುದನ್ನು ತಡೆಯಲು ಸಚಿವರ ಮೇಲೆ ಒತ್ತಡ ಹಾಕಿದ್ದಾರೆ. ಅಂಬೇಡ್ಕರ್​ ಸಮುದಾಯ ಭವನ, ಶಾಲೆ ಜಾಗವೆಂದು ಇಲ್ಲಸಲ್ಲದ ನೆಪ ಹೇಳಿ ಅಧಿಕಾರಿಗಳ ಮೂಲಕ ಹಿಂಸೆ ನೀಡುತ್ತಿದ್ದಾರೆಂದು ಆರೋಪಿಸಿದರು.

ಈ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದೇವೆ. ಆದರೂ, ಅವರು ತಮ್ಮವರ ಪರ ನಿಂತಿದ್ದಾರೆ. ಚುನಾವಣೆಯಲ್ಲಿ ಅವರ ಪರವಾಗಿ ಕೆಲಸ ಮಾಡಿಲ್ಲವೆಂಬ ಕಾರಣಕ್ಕೆ ದಲಿತನಾದ ನನಗೆ ಅನ್ಯಾಯ ಎಸಗುತ್ತಿದ್ದಾರೆ. ಜಾಗ ಯಾರದೆಂಬ ಬಗ್ಗೆ ಸೂಕ್ತ ದಾಖಲೆಗಳಿಲ್ಲ. ಬಹುತೇಕರು ಮನೆ ಕಟ್ಟಿಕೊಂಡಿದ್ದಾರೆ. ಈಗಲೂ ಕೆಲವರು ಮನೆ ನಿರ್ಮಿಸುತ್ತಿದ್ದಾರೆ. ಅವರಿಗೆ ಯಾವುದೇ ಅಡ್ಡಿ ಇಲ್ಲ. ಆದರೆ, ನನ್ನ ಮನೆ ಕಾಮಗಾರಿ ನಿಲ್ಲಿಸಿದ್ದಾರೆ. ನಿತ್ಯ ಇಬ್ಬರು ಪೊಲೀಸರನ್ನು ಕಳಿಸುತ್ತಾರೆ. ಇದನ್ನು ಖಂಡಿಸಿ ಜು.11ರಂದು ನವಲಿಯ ಮಾಕಣ್ಣ ಕಂಬ್ಳಿ ವೃತ್ತದಲ್ಲಿ 48 ಗಂಟೆಗಳ ಅಹೋರಾತ್ರಿ ಧರಣಿ ಹಮ್ಮಿಕೊಳ್ಳುವೆ ಎಂದು ತಿಳಿಸಿದರು.

ಗ್ರಾಮಸ್ಥರಾದ ಲಿಂಗರಾಜ ನವಲಿ, ಭೀಮನಗೌಡ ಹರ್ಲಾಪುರ, ನಿಂಗಪ್ಪ ನಾಯಕ, ವಾಗೇಶ ಪರಂಗಿ, ಬಸವರಾಜ ಶೀಲವಂತರ, ಅಲ್ಲಮಪ್ರಭು ಬೆಟ್ಟದೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net