ಸಚಿವ ತಂಗಡಗಿ ವಿರುದ್ಧದ ಆರೋಪಕ್ಕೆ ಇಮ್ಮಡಿ ಶ್ರೀ ಅಸಮಾಧಾನ

ctd-----.....1
Published on

ಚಿತ್ರದುರ್ಗ: ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ವಿರುದ್ಧ ಶೇ.25 ಕಮಿಷನ್ ಆರೋಪ ಮಾಡಿರುವ ನೆಲಮಂಗಲ ಶ್ರೀ ತೈಲೇಶ್ವರ ಗಾಣಿಗರ ಸಂಸ್ಥಾನ ಮಠದ ಶ್ರೀ ಪೂರ್ಣಾನಂದ ಪುರಿ ಸ್ವಾಮೀಜಿ ಅವರ ಹೇಳಿಕೆಗೆ ತಮ್ಮ ವಿರೋಧವಿದೆ ಎಂದು ಚಿತ್ರದುರ್ಗ ಭೋವಿಗುರು ಪೀಠದ ಶ್ರೀ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಸಚಿವರ ವಿರುದ್ಧ ಆಧಾರ ರಹಿತ ಆರೋಪ ಮಾಡಿರುವ ಪೂಜ್ಯರು ಪೂರ್ವಾಶ್ರಮದಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಆಡಳಿತದ ಅರಿವು ನಮಗಿಂತ ಅವರಿಗೆ ಚೆನ್ನಾಗಿದೆ ಗೊತ್ತಿದೆ. ತಮ್ಮ ಸಮುದಾಯದ ಅಭಿವೃದ್ಧಿಗೆ ಮಂಜೂರಾಗಿದ್ದ 3.50 ಕೋಟಿ ರೂ. ಪೈಕಿ 2 ಕೋಟಿ ರೂ. ಬಿಡುಗಡೆಯಾಗಿದೆ. ಒಂದೂವರೆ ಕೋಟಿ ರೂ. ಅನುದಾನ ಬಂದಿಲ್ಲವೆಂದು ಸಚಿವರ ವಿರುದ್ಧ ದೂರಿದ್ದಾರೆ.

ಪೂಜ್ಯರು ಸರ್ಕಾರದಿಂದ ಇನ್ನೂ ಹೆಚ್ಚಿನ ಅನುದಾನ ಪಡೆದು ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲಿ. ಒಂದು ಸರ್ಕಾರ ಮಂಜೂರು ಮಾಡಿದ್ದ ಅನುದಾನ ಮತ್ತೊಂದು ಸರ್ಕಾರದಲ್ಲಿ ಬಿಡುಗಡೆ ಆಗುವುದು ಕಷ್ಟ. ಬಸವರಾಜ ಬೊಮ್ಮಾಯಿ ಸರ್ಕಾರ ತಮ್ಮ ಪೀಠಕ್ಕೆ ಘೋಷಿಸಿದ ಅನುದಾನ ಬಿಡುಗಡೆ ಆಗಿಲ್ಲ ಎಂದರು.

ನಮಗೆ ಕಾಯುವ ತಾಳ್ಮೆ ಇರಬೇಕು. ಈಚೆಗೆ ಪೀಠ ಅಲಂಕರಿಸಿರುವ ಪೂಜ್ಯರು ಆಧಾರ ರಹಿತ ಆರೋಪಗಳನ್ನು ಮಾಡಬಾರದು. ಒಂದೂವರೆ ಕೋಟಿ ರೂ. ಅನುದಾನಕ್ಕಾಗಿ ನೇರ ಸಿಎಂ ಭೇಟಿ ಮಾಡಿ ಚರ್ಚಿಸಬಹುದಾಗಿತ್ತು. ಗ್ಯಾರಂಟಿ ಬಜೆಟ್ ಹಿನ್ನೆಲೆಯಲ್ಲಿ ಒಂದು ಕೋಟಿ ರೂ. ಮೀರಿದ ಅನುದಾನದ ವಿಚಾರವನ್ನು ಖುದ್ದು ಸಿಎಂ ನಿರ್ಧರಿಸುತ್ತಿದ್ದಾರೆ ಎಂದರು.

ಬಡತನದಿಂದ ಬಂದಿರುವ ಸಚಿವ ತಂಗಡಗಿ ಉದ್ಯಮದಿಂದ ರಾಜಕಾರಣಕ್ಕೆ ಪ್ರವೇಶಿಸಿದವರು. ಉದ್ಯಮದ ಲಾಭವನ್ನು ಸಮುದಾ ಯದ, ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಬಳಸುತ್ತಿದ್ದಾರೆ. ಕಾಯಕ, ದಾಸೋಹದ ಪರಿಕಲ್ಪನೆ ಅರ್ಥ ಮಾಡಿಕೊಂಡು ಜನ ಸೇವೆಯಲ್ಲಿ ಇರು ವಂಥ ಸಚಿವರಾಗಿದ್ದಾರೆ ಎಂದರು.

ಎಸ್‌ಜೆಎಸ್ ಶಿಕ್ಷಣ ಸಂಸ್ಥೆ ನಿರ್ದೇಶಕ ಕಾಳಘಟ್ಟದ ಹನುಂತಪ್ಪ ಮಾತನಾಡಿ, ಸಚಿವರ ವಿರುದ್ಧ ಆಧಾರ ರಹಿತ ಆರೋಪ ಸಲ್ಲದು. ಪೂ ರ್ಣಾನಂದ ಶ್ರೀಗಳಿಗೆ ಬಹುಶಃ ಅವರ ಪೂರ್ವಾಶ್ರಮ ನೆನಪಾಗಿರಬೇಕು. ಸಲ್ಲದ ಆರೋಪಗಳನ್ನು ಮುಂದುವರಿಸಿದರೆ ಪ್ರತಿಭಟನೆ ನಡೆ ಸ ಬೇಕಾಗುತ್ತದೆ ಎಂದರು.

ಭೋವಿ ಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ, ಜಿಲ್ಲಾ ಭೋವಿ ಸಂಘದ ಕಾರ್ಯದರ್ಶಿ ಲಕ್ಷ್ಮಣ್, ಎಸ್‌ಜೆಎಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಿ.ಸಿ. ಮೋಹನ್, ನಿರ್ದೇಶಕ ವೀರಣ್ಣ, ಚಳ್ಳಕೆರೆ ತಾಲೂಕು ಭೋವಿ ಸಮಾಜದ ಅಧ್ಯಕ್ಷ ಎಚ್. ಅಂಜನೇಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net