

ಬೀದರ್: ಕರೊನಾ ಸೋಂಕಿನ ಪ್ರಯುಕ್ತ ಅಕ್ಕಮಹಾದೇವಿ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಅಧ್ಯಕ್ಷ ಶಾಂತಪ್ಪ ಜಿ.ಪಾಟೀಲ್ ನಗರದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರಿಗೆ ರೋಗ ನಿರೋಧಕ ಶಕ್ತಿ ವೃದ್ಧಿಸುವ ಕಷಾಯ ಚೂರ್ಣ ನೀಡಿದರು.
ಬ್ರಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್-19 ಪರೀಕ್ಷೆ ಪ್ರಯೋಗಾಲಯ ಉದ್ಘಾಟನೆ ಕಾರ್ಯಕ್ರಮದ ಬಳಿಕ ಸಚಿವರನ್ನು ಭೇಟಿ ಮಾಡಿದ ಪಾಟೀಲ್, ಜಿಲ್ಲಾದ್ಯಂತ ಕರೊನಾ ಸೈನಿಕರಿಗೆ ಕಷಾಯ ಚೂರ್ಣ ವಿತರಿಸುತ್ತಿರುವುದನ್ನು ವಿವರಿಸಿದರು. ಬಸವಕಲ್ಯಾಣ, ಬೀದರ್, ಭಾಲ್ಕಿ, ಹುಮನಾಬಾದ್, ಔರಾದ್ ಸೇರಿ ಜಿಲ್ಲೆಯ ವಿವಿಧೆಡೆ ಮಹಾಮಾರಿ ಕರೊನಾ ತಡೆಗೆ ಶ್ರಮಿಸುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೊಲೀಸರು ಹಾಗೂ ಪೌರ ಕಾರ್ಮಿಕರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಷಾಯ ಚೂರ್ಣ ವಿತರಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರ ಆಯುಷ್ ಸಚಿವಾಲಯ ಸೂಚನೆಯಂತೆ ಕಾಲೇಜಿನಲ್ಲೇ ತಯಾರಿಸಿರುವ ಕಷಾಯ ಚೂರ್ಣ ಅನ್ನು ಬಿಸಿ ನೀರಿನಲ್ಲಿ ಬೆರೆಸಿ ಸೇವಿಸಬಹುದಾಗಿದೆ. ಸೋಂಕಿನ ವಿರುದ್ಧ ಸಮರ ನಡೆಸುತ್ತಿರುವವರ ರೋಗ ನಿರೋಧಕ ಶಕ್ತಿ ವೃದ್ಧಿಸುವುದು ಕಷಾಯ ಚೂರ್ಣ ವಿತರಣೆ ಉದ್ದೇಶವಾಗಿದೆ ಎಂದು ಹೇಳಿದರು.