

ಹಾಸನ: ಜಿಲ್ಲೆಯಲ್ಲಿ ಬರ ತಾಂಡವವಾಡುತ್ತಿದ್ದರೂ ಜಿಲ್ಲೆಗೆ ಕಳೆದ ಎರಡು ತಿಂಗಳಿನಿಂದ ಕಾಲಿಡದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರು ಬುಧವಾರ ನಗರಕ್ಕೆ ಬಂದಾಗ ಅವರ ಕಾರನ್ನು ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ 15ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಾಸನಂಬಾ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಗೆ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಆಗಮಿಸಿದ್ದರು. ಈ ವೇಳೆ ಕಾರನ್ನು ತಡೆದು ಪ್ರತಿಭಟನೆ ಮಾಡಲು ಮುಂದಾದ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ಸೇರಿದಂತೆ 15ಕ್ಕೂ ಹೆಚ್ಚು ಜನರನ್ನು ಬಂಧಿಸಲಾಯಿತು.
ಕಳೆದ ಆಗಸ್ಟ್ 15ರಂದು ಜಿಲ್ಲೆಗೆ ಆಗಮಿಸಿ ನಂತರ ಜಿಲ್ಲೆಯ ಕಡೆಗೆ ಉಸ್ತುವಾರಿ ಸಚಿವರು ಬಂದಿಲ್ಲ. ಜಿಲ್ಲೆಯಲ್ಲಿ ಬರಗಾಲದಿಂದ ಜನರು ಸಾಕಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಅವರ ಸಮಸ್ಯೆಗಳನ್ನು ಕೇಳಲು ಒಂದು ದಿನವೂ ಆಗಮಿಸಿಲ್ಲ. ರಾಜ್ಯಾದ್ಯಂತ ನಡೆದ ಜನತಾ ದರ್ಶನಕ್ಕೂ ಗೈರಾಗಿದ್ದರು. ಸಚಿವರು ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದರು.
ಹಾಕಲು ಯತ್ನಿಸಿದರು.