

ಮೈಸೂರು: ಬಿಡಿಎ ವಸತಿ ಯೋಜನೆಯಲ್ಲಿ ಅಕ್ರಮ ನಡೆಸಿರುವ ಆರೋಪ ಎದುರಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ರಾಜೀನಾಮೆಗೆ ಆಗ್ರಹಿಸಿ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಎಫ್‌ಟಿಎಸ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಬಿಡಿಎ ವಸತಿ ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಸ್ವೀಕಾರಕ್ಕೆ ಸಂಬಂಧಿಸಿದಂತೆ ಸಚಿವ ಎಸ್.ಟಿ.ಸೋಮಶೇಖರ್ ಸೇರಿದಂತೆ 9 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 2012ರಲ್ಲಿ ಬಿಡಿಎ ವಸತಿ ಯೋಜನೆಯಲ್ಲಿ ಪ್ಲಾಟ್‌ಗಳ ಗುತ್ತಿಗೆಗಾಗಿ ಅಂದಿನ ಬಿಡಿಎ ಅಧ್ಯಕ್ಷರಾಗಿದ್ದ ಎಸ್.ಟಿ.ಸೋಮಶೇಖರ್ 12 ಕೋಟಿ ರೂ. ಲಂಚ ಪಡೆದಿದ್ದಾರೆ. ಇಂತಹ ಭ್ರಷ್ಟ ಸಚಿವರಿಂದ ದಸರಾ ಉಸ್ತುವಾರಿಗೆ ಕಳಂಕ ಬರುತ್ತದೆ ಎಂದು ದೂರಿದರು.
ಮೈಸೂರು ಭವ್ಯ ಪರಂಪರೆ, ಇತಿಹಾಸ ಹೊಂದಿದ್ದು, ಭ್ರಷ್ಟ ಸಚಿವರಿಂದ ಪಾರದರ್ಶಕತೆ, ಪ್ರಾಮಾಣಿಕತೆಯಿಂದ ದಸರಾ ಉಸ್ತುವಾರಿ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು
ಕಾಂಗ್ರೆಸ್ ಮುಖಂಡರಾದ ಎಸ್.ರಾಜೇಶ್, ಮಂಟೆಲಿಂಗಯ್ಯ, ವಿಶ್ವರಾಜ್, ಜಿ.ಎಲ್.ಪ್ರವೀಣ್, ರಾಕೇಶ್ ಕುಮಾರ್, ರಹೀಮ್, ಪಾಲಿಕೆ ಮಾಜಿ ಸದಸ್ಯ ಉದಯ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.