ಸಚಿವ ಉಮೇಶ್ ಕತ್ತಿ ನಿಧನಕ್ಕೆ ಸಂತಾಪ

07_09_Mdy_03(Kathi BJP)
Published on

ಮಂಡ್ಯ: ಹಿರಿಯ ಮುತ್ಸದ್ದಿ ರಾಜಕಾರಣಿ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಅರಣ್ಯ ಸಚಿವ ಉಮೇಶ್ ಕತ್ತಿ ನಿಧನದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.


ನಗರದ ವಿಕಾಸ ಭವನದಲ್ಲಿ ಬುಧವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಮಾತನಾಡಿ, ಉಮೇಶ್ ಕತ್ತಿ ಅವರ ಅಕಾಲಿಕ ಮರಣಕ್ಕೆ ಇಡೀ ರಾಜಕೀಯ ವಲಯವೇ ಶೋಕ ಸಾಗರದಲ್ಲಿ ಮುಳುಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಪ್ರಭಾವಿ ರಾಜಕಾರಣದಲ್ಲಿ ಒಬ್ಬರಾಗಿದ್ದರು.

ಬೆಳಗಾವಿಯ ಹುಕ್ಕೇರಿ ಕ್ಷೇತ್ರದಿಂದ ಸತತ 9 ಬಾರಿ ವಿವಿಧ ಪಕ್ಷಗಳಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಯಾವುದೇ ಪಕ್ಷದಲ್ಲಿದ್ದರೂ ಜನ ಅವರನ್ನು ಆಯ್ಕೆ ಮಾಡುತ್ತಿದ್ದರು ಎಂದರೆ ಅಲ್ಲಿನ ಜನರ ಮನವನ್ನು ಹೇಗೆ ಗೆದ್ದಿರಬಹುದು ಎಂಬುದು ತಿಳಿಯುತ್ತದೆ ಎಂದರು.


ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಮಾತನಾಡಿ, ಬೆಲ್ಲದ ಬಾಗೇವಾಡಿಯಂತಹ ಕುಗ್ರಾಮದಲ್ಲಿ ಅತ್ಯಂತ ಶ್ರೀಮಂತ ಮನೆತನದಲ್ಲಿ ಜನಿಸಿದ ಉಮೇಶ್ ಕತ್ತಿ ಅವರು ಸಾಮಾಜಿಕ ಕಳಕಳಿ ಹೊಂದಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಅಭಿವೃದ್ಧಿ ಮಾಡಬೇಕು ಎಂಬ ತವಕ ಹೊಂದಿದ್ದರು. ಏನೂ ಮಾಡಲಾಗದ ಸ್ಥಿತಿಯಿಂದಾಗಿ ಅಸಹಾಯಕರಾದ ಅವರು ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದರು. ಇದು ಅವರ ಎದೆಗಾರಿಕೆಯನ್ನು ತೋರುತ್ತದೆ ಎಂದು ತಿಳಿಸಿದರು.


ಬಿಜೆಪಿ ಮುಖಂಡರಾದ ವಸಂತ್, ನಗರಸಭಾ ಸದಸ್ಯರಾದ ಚಂದ್ರು, ಶಿವು ಕೆಂಪಯ್ಯ, ಪ್ರಸನ್ನ, ಶಿವಲಿಂಗಯ್ಯ, ನಾಗಣ್ಣ ಮಲ್ಲಪ್ಪ, ಹರ್ಷ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net