ಸಚಿವ ಈಶ್ವರಪ್ಪಗೆ ಜೀವ ಬೆದರಿಕೆ ಹಾಕಿದ ಅನಾಮಿಕ: ಮೌಖಿಕ ದೂರು ನೀಡಿದ ಸಚಿವರು

Screenshot_2020-01-03-20-42-24-1233242057.png
Published on

ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಶುಕ್ರವಾರ ಮೊಬೈಲ್‌ಗೆ ಕರೆ ಮಾಡಿ ಅಪರಿಚಿತನೊಬ್ಬ ಜೀವ ಬೆದರಿಕೆ ಹಾಕಿದ್ದು, ಈ ಸಂಬಂಧ ಎಸ್ಪಿ ಕೆ.ಎಂ.ಶಾಂತರಾಜು ಅವರಿಗೆ ಸಚಿವರು ಮೌಖಿಕ ದೂರು ನೀಡಿದ್ದಾರೆ.ಮಧ್ಯಾಹ್ನ ಸಚಿವರ ಮೊಬೈಲ್ ನಂಬರ್‌ಗೆ ತಮಿಳಿನಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ಕರೆ ಮಾಡಿದ್ದು, ಮೊದಲು ಕರೆ ಸ್ವೀಕರಿಸಿದ ಸಚಿವರ ಆಪ್ತ ಸಹಾಯಕನ ಬಳಿ ಸಚಿವ ಈಶ್ವರಪ್ಪ ಅವರ ಬಳಿ ಮಾತನಾಡಬೇಕು ಎಂದಿದ್ದಾನೆ. ಯಾರೋ ಸಾರ್ವಜನಿಕರು ಸಮಸ್ಯೆ ಹೇಳಿಕೊಳ್ಳಲು ಕರೆ ಮಾಡಿರಬೇಕೆಂದು ನಂಬಿ ಸಚಿವರಿಗೆ ಮೊಬೈಲ್ ಹಸ್ತಾಂತರಿಸಿದ್ದರು.ಈ ವೇಳೆ ಸಚಿವ ಈಶ್ವರಪ್ಪ ಜತೆ ಮಾತನಾಡಿರುವ ಅನಾಮಿಕ, ಹಿಂದುತ್ವದ ಬಗ್ಗೆ ಬಹಳ ಮಾತನಾಡುತ್ತೀಯಾ. ಇದೆಲ್ಲ ಇನ್ಮುಂದೆ ನಡೆಯುವುದಿಲ್ಲ. ಮುಂದಿನ 48 ಗಂಟೆಯೊಳಗೆ ನಿಮ್ಮ ಕಥೆ ಮುಗಿಸುತ್ತೇನೆಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ಪಿ ಸಚಿವರಿಗೆ ಕರೆ ಮಾಡಿದ್ದ ಮೊಬೈಲ್ ನಂಬರ್ ಪರಿಶೀಲನೆಗೆ ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net