ಸಚಿವ ಈಶ್ವರಪ್ಪ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ, ಮಾಜಿ ಸಚಿವ ಆಂಜನಮೂರ್ತಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ೋಷಣೆ

21 Nela Ph 01 Protest
Published on

ನೆಲಮಂಗಲ: ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ವಿಚಾರವಾಗಿ ಹೇಳಿಕೆ ನೀಡಿದ್ದ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಮಾಜಿ ಸಚಿವ ಅಂಜನಮೂರ್ತಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ಸಮಾವೇಶಗೊಂಡ ನೂರಾರು ಕಾರ್ಯಕರ್ತರು, ಈಶ್ವರಪ್ಪ ಅವರನ್ನು ಕೂಡಲೇ ಸಂಪುಟದಿಂದ ವಜಗೊಳಿಸುವಂತೆ ಒತ್ತಾಯಿಸಿದರು.

ಕೆಂಪು ಕೋಟೆ ಮೇಲೆ ರಾಷ್ಟ್ರಧ್ವಜದ ಜಾಗದಲ್ಲಿ ಕೇಸರಿಧ್ವಜ ಹಾರಿಸುತ್ತೇವೆಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದು ನೋವಿನ ಸಂಗತಿ. ಅದನ್ನು ಖಂಡಿಸಿ ಈಗಾಗಲೇ ಈಸ್ವರಪ್ಪ ವಿರುದ್ಧ ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಪ್ರತಿಭಟನೆ ನಡೆಯುತ್ತಿದೆ, ಈಶ್ವರಪ್ಪ ರಾಷ್ಟ್ರದ್ರೋಹದ ಮಾತುಗಳನ್ನಾಡಿದ್ದು, ಕೋಟ್ಯಂತರ ಭಾರತೀಯರಿಗೆ ನೋವುಂಟಾಗಿದೆ ಎಂದು ಮಾಜಿ ವಸತಿ ಸಚಿವ ಅಂಜನಾಮೂರ್ತಿ ಬೇಸರ ವ್ಯಕ್ತಪಡಿಸಿದರು.

ಸಚಿವರು ನೀಡಿದ್ದ ಹೇಳಿಕೆ ಅವರ ಸಂಸ್ಕೃತಿ ತೋರಿಸುತ್ತದೆ. ದೇಶದ್ರೋಹದ ಹೇಳಿಕೆ ನೀಡಿ ಜನರ ರಾಷ್ಟ್ರಭಕ್ತಿ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ, ಸಚಿವರ ವಿರುದ್ಧ ರಾಜ್ಯಪಾಲರು ಕೂಡಲೇ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂವಿಧಾನ ವಿರೋಧಿ ಹೇಳಿಕೆ: ಸರ್ಕಾರದ ಜವಬ್ದಾರಿಯುತ್ತ ಸ್ಥಾನದಲ್ಲಿರುವ ಸಚಿವ ಈ ರೀತಿ ಸಂವಿಧಾನದ ವಿರುದ್ಧವಾಗಿ ಹೇಳಿಕೆ ನೀಡಿರುವುದು ಬೇಸರದ ಸಂಗತಿ. ಭಾರತೀಯ ಸಂವಿಧಾನದಲ್ಲಿ ರಾಷ್ಟ್ರಧ್ವಜ, ರಾಷ್ಟ್ರಗೀತೆಗೆ ವಿಶೇಷ ಸ್ಥಾನ ಮಾನವಿದ್ದು, ಪ್ರತಿಯೊಬ್ಬರೂ ಸಂವಿಧಾನಕ್ಕೆ ಗೌರವ ಸಲ್ಲಿಸಿಬೇಕು ಎಂದು ಕೆಪಿಸಿಸಿ ಸದಸ್ಯ ಖಲೀಮುಲ್ಲಾ ಹೇಳಿದರು.

ಈಶ್ವರಪ್ಪ ರಾಷ್ಟ್ರಧ್ವಜದ ಬಗ್ಗೆ ಹಗುರವಾಗಿ ಮಾತನಾಡಿ ಸಂವಿಧಾನಕ್ಕೆ ಅಗೌರವ ತರುವ ಕೆಲಸ ಮಾಡಿದ್ದಾರೆ. ರಾಷ್ಟ್ರದ ವಿಚಾರವಾಗಿ ಲಘುವಾಗಿ ಮಾತನಾಡುವುದೇ ಅಪರಾಧವಾಗಿದೆ. ಸಂವಿಧಾನ ಬದ್ಧವಾಗಿ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನಗಳಲ್ಲಿ ಸಚಿವ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆ ಬಳಿಕ ವಿಶೇಷ ತಹಸೀಲ್ದಾರ್ ಪ್ರಕಾಶ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿ.ರಂಗನಾಥ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಾಗರತ್ನಮ್ಮ, ಅಸಂಘಟಿ ಕಾರ್ಮಿಕ ಘಟಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎನ್.ಕನಕರಾಜು, ಯೂತ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣ್‌ಗೌಡ, ಬೂದಿಹಾಲ್ ಗ್ರಾ.ಪಂ ಅಧ್ಯಕ್ಷ ಮುನಿರಾಜು, ಮಾಜಿ ಅಧ್ಯಕ್ಷ ಎಂ.ಕೆ.ನಾಗರಾಜು, ಮುಖಂಡ ಕೆ.ಕೆ.ಕೃಷ್ಣಪ್ಪ, ದೀಪಕ್‌ಕಿರಣ್, ಗೋವರ್ಧನ್, ಗಂಗರಾಜು, ಸೋಮವಿಜಯ್, ರವಿಕುಮಾರ್, ರುಕ್ಮಿಣಿ, ರಾಜೇಶ್ವರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net