

ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮುಗಿಸಬೇಕು ಎಂದು ಹೇಳಿಕೆ ನೀಡಿದ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರನ್ನು ತಕ್ಷಣ ಬಂಧಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆಗ್ರಹಿಸಿದರು.
ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಂತಿ ನೆಮ್ಮದಿ, ಸಹಬಾಳ್ವೆ, ಅಭಿವೃದ್ಧಿ ವಿಚಾರ ಬಿಟ್ಟು ಬರಿ ಹೊಡಿ-ಬಡಿ ಎಂಬುದು ಬಿಜೆಪಿಯ ಸಂಸ್ಕೃತಿಯಾಗಿದೆ. ಈ ಸರ್ಕಾರದ ಅವಧಿ ಇನ್ನು ಕೆಲವೇ ದಿನಗಳು. ಅಧಿಕಾರ ಕಳೆದುಕೊಳ್ಳುವ ಹೀತಿಯಲ್ಲಿ ಹುಚ್ಚರಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಮಾತನಾಡಿರುವುದು ಅವರ ಪಕ್ಷದ ಹಾಗೂ ವೈಯಕ್ತಿಕ ಬದ್ಧತೆ ಏನೆಂಬುದು ತೋರಿಸುತ್ತದೆ. ಈ ಸರ್ಕಾರ ಉತ್ತಮ ಆಡಳಿತ ನೀಡಲು ಸಂಪೂರ್ಣ ವಿಫಲವಾಗಿದೆ. ಭ್ರಷ್ಟಾಚಾರದಲ್ಲಿ ಮುಳಗಿದೆ. ಅಭಿವೃದ್ಧಿ, ಯುವಕರಿಗೆ ಉದ್ಯೋಗ, ಬಡವರಿಗೆ ಮನೆ ಕೊಡುವುದರ ಬಗ್ಗೆ ಮಾತನಾಡದ ಇವರು ಸಮಾಜದಲ್ಲಿ ದ್ವೇಷ ಭಾವನೆ ಸೃಷ್ಟಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ನೂರು ಸಲ ಬರಲಿ. ನಾವೇ ಅಧಿಕಾರಕ್ಕೆ ಬರುವುದು. ಇದು ಭಾರತೀಯ ಜನತಾ ಪಾರ್ಟಿ ಅಲ್ಲ. ಭ್ರಷ್ಟ ಜನತಾ ಪಾರ್ಟಿ, ಬ್ರೋಕರ್ ಜನತಾ ಪಾರ್ಟಿ ಎಂದು ಹರಿಹಾಯ್ದುರು.