

ಔರಾದ್: ಕೇಂದ್ರ ಗೃಹ ಸಚಿವ ಅಮಿತ್ ಷಾ ಸಂಸತ್ತಿನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಕುರಿತು ಹಗುರವಾಗಿ ಮಾತನಾಡಿರುವುದು ದೇಶದ್ರೋಹದ ಕೆಲಸವಾಗಿದ್ದು, ಕೂಡಲೇ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಡಾ.ಬಿ .ಆರ್.ಅಂಬೇಡ್ಕರ್ ಸ್ವಾಭಿಮಾನಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಝೆರೆಪ್ಪ ವರ್ಮಾ ಒತ್ತಾಯಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆ ಖಂಡಿಸಿ ಶುಕ್ರವಾರ ಪಟ್ಟಣದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಹೋರಾಟ ಸಮಿತಿ ಹಾಗೂ ದಲಿತ ಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರನ್ನು ಇಡೀ ವಿಶ್ವವೇ ಸ್ಮರಿಸುತ್ತದೆ. ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ದೇಶದ ಶೋಷಿತರು, ಅಲ್ಪಸಂಖ್ಯಾಂತರು ಮತ್ತು ಹಿಂದುಳಿದ ಸಮಾಜದವರು ಸ್ವತಂತ್ರವಾಗಿ ಬಾಳಲು ಸಾಧ್ಯವಾಗಿದೆ. ಆದರೆ ಅವರ ಬಗ್ಗೆ ಮಾತನಾಡಿರುವುದು ಖಂಡನೀಯವಾಗಿದೆ ಎಂದರು.
ಪಟ್ಟಣದಲ್ಲಿ ಬೆಳಗ್ಗೆಯಿಂದ ಎಲ್ಲ ಅಂಗಡಿ-ಮುಗ್ಗಟ್ಟುಗಳು ಸ್ವಯಂ ಘೋಷಿತ ಬಂದ್ ಮಾಡಿದ್ದರು. ರಸ್ತೆಗಳು ಮತ್ತು ಕೇಂದ್ರ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಪ್ರತಿಭಟನಾಕಾರರು ಸಾರ್ವಜನಿಕ ಆಸ್ಪತ್ರೆಯಿಂದ ಎಪಿಎಂಸಿ ವೃತ್ತದವರೆಗೆ ಮೆರವಣಿಗೆ ಮಾಡಿ ಸಚಿವರ ವಿರುದ್ಧ ಘೋಷಣೆ ಕೂಗಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಗಣಪತ್‌ರಾವ್ ಶೆಂಬೆಳ್ಳಿ, ಆನಂದ್ ಗಲಗಲೆ, ಸತೀಷ ವಗ್ಗೆ, ಧನರಾಜ್ ಮುಸ್ತಾಪೂರೆ, ಸುಭಾಷ ಲಾಧಾ, ಸುಧಾಕರ್ ಕೊಳ್ಳುರ್, ತುಕಾರಾಮ್ ಹಸನ್ಮುಖಿ, ಬಾಬುರಾವ್, ರಾಮಣ್ಣ ವಡೆಯರ್, ಡಾ. ಫಯಾಜ್ ಅಲಿ, ರಹೀಂ ಮೌಲಾಸಾಬ್, ತಾನಾಜಿ, ಸುನೀಲ್ ಮಿತ್ರಾ, ಸಂತೋಷ ಶಿಂಧೆ, ಶಿವು ಕಾಂಬಳೆ, ರತ್ನದೀಪ, ಸಂಜುಕುಮಾರ್ ಲಾಧಾ, ಉತ್ತಮ ಮಾಂಜ್ರೇಕರ್, ಪ್ರವೀಣ ಕಾರಂಜೆ, ರಾಹುಲ್ ಖಂದಾರೆ, ವಿನೋದ್, ಪ್ರಕಾಶ, ಇತರರಿದ್ದರು. ಸಿಪಿಐ ರಘುವೀರ ಸಿಂಗ್ ಠಾಕೂರ್ ಗರಡಿಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಸಂತಾಪ: ಸಮಿತಿ ಸದಸ್ಯರು ಹೋಟಾರಕ್ಕೂ ಮುನ್ನ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಎರಡು ನಿಮಿಷ ಕಾಲ ಮೌನಾಚರಣೆ ಆಚರಿಸಿ ಸಂತಾಪ ಸೂಚಿಸಿದರು.