

ಶಿವು ತೂಬಗೆರೆ
ಗಣೇಶ ಹಬ್ಬ ಹತ್ತಿರವಾಗುತ್ತಿದ್ದಂತೆ ದೇಸಿ ಗೋವುಗಳ ಸಗಣಿಯಲ್ಲಿ ತಯಾರಿಸಲಾಗಿರುವ ಗೌರಿ, ಗಣಪತಿ ಮೂರ್ತಿಗಳು ಕಣ್ಮನ ಸೆಳೆಯುತ್ತಿವೆ.
ಹೌದು.. ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಘಾಟಿ ಸುಬ್ರಮಣ್ಯ ಕ್ಷೇತ್ರದ ಹತ್ತಿರದಲ್ಲಿರುವ ಗೋಶಾಲೆಯಲ್ಲಿ ದೇಸಿ ಗೋವುಗಳ ಸಗಣಿಯಲ್ಲಿ ಗಣೇಶನ ಮೂರ್ತಿಗಳನ್ನು ಬಿಡಿಸಿ ತಯಾರು ಮಾಡುತ್ತಿದ್ದಾರೆ ಹಾಗೂ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುವ ಮೂಲಕ ಪರಿಸರ ಜಾಗೃತಿಗೆ ಮುಂದಾಗುತ್ತಿದ್ದಾರೆ.
ಗಣೇಶ ಹಬ್ಬಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ವಿಶೇಷ ರೀತಿಯ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ, ಆದರೆ ಕೆಲ ಗಣೇಶ ಮೂರ್ತಿಗಳು ಪರಿಸರಕ್ಕೆ ಹಾನಿ ಉಂಟು ಮಾಡುತ್ತಿವೆ, ಆದ್ದರಿಂದ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಉದ್ದೇಶದಿಂದ ಗೋವಿನ ಸಗಣಿಯಿಂದ ಗಣೇಶ ಮೂರ್ತಿಗಳನ್ನು ಮಾಡಲಾಗುತ್ತಿದೆ.
ಸಗಣಿಯಲ್ಲಿ ಮಾಡಿರುವ ಗಣೇಶನ ಮೂರ್ತಿಗೆ ನೈಸರ್ಗಿಕ ಬಣ್ಣಗಳನ್ನು ಹಂಚಿ, ಗೌರಿ ಗಣೇಶನ ಮೂರ್ತಿಗಳು ಕಣ್ಮನ ಸೆಳೆಯುತ್ತಿವೆ. ಗಣೇಶನ ಮೂರ್ತಿಗಳು ಪೂಜೆಯ ನಂತರ ನೀರಿನಲ್ಲಿ ಸುಲಭವಾಗಿ ಕರಗುವ ಜತೆಗೆ ಆ ಸಗಣಿಯ ನೀರನ್ನು ಗಿಡಗಳಿಗೂ ಬಳಸಬಹುದಾಗಿದೆ ಹಾಗೂ ಗಣಪತಿ ಮೂರ್ತಿಯನ್ನು ಕೆರೆಯಲ್ಲಿ ಬಿಟ್ಟರೆ ಪರಿಸರ ಕಾಳಜಿ ವಹಿಸಬಹುದು.
ಇನ್ನು ಘಾಟಿ ಸಮೀಪದ ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ 600ಕ್ಕೂ ಹೆಚ್ಚು ರಾಸುಗಳಿವೆ, ಅದರಲ್ಲೂ ವಿಶೇಷ ತಳಿಗಳ ಜಾನುವಾರುಗಳನ್ನು ಸಾಕಲಾಗುತ್ತಿದೆ. ಪ್ರತಿದಿನ ಒಟ್ಟು ಮೂರು ಟನ್‌ಗಳಷ್ಟು ಸಗಣಿಯನ್ನು ಸಂಗ್ರಹಿಸಲಾಗುತ್ತಿದೆ. ಗೋ ಶಾಲೆಯಲ್ಲಿ ಸಂಗ್ರಹಿಸಲಾಗಿರುವ ಸಗಣಿಯಲ್ಲಿ ಬೆರಣಿ, ದೀಪ, ಧೂಪ, ಮೊಬೈಲ್ ಸ್ಟ್ಯಾಂಡ್ ಸೇರಿ ವಿವಿಧ ವಸ್ತುಗಳನ್ನು ತಯಾರಿಸಲಾಗುತ್ತದೆ ಎಂದು ರಾಷ್ಟ್ರೋತ್ಥಾನ ಗೋಶಾಲೆಯ ಡಾ.ವೇಲೂರು ಜೀವಂತ ಕುಮಾರ್ ತಿಳಿಸಿದರು.
ಪರಿಸರ ಜಾಗೃತಿಗಾಗಿ ಹಾಗೂ ಸಗಣಿಯ ಮಹತ್ವವನ್ನು ತಿಳಿಸಲು ಗೌರಿ ಗಣೇಶ ಮೂರ್ತಿಗಳನ್ನು ತಯಾರು ಮಾಡುತ್ತಿದ್ದೇವೆ.ರಾಮಚಂದ್ರಮೇಲ್ವಿಚಾರಕ, ರಾಷ್ಟ್ರೋತ್ಥಾನ ಗೋಶಾಲೆ