

ಬೀದರ್: ಜಿಲ್ಲಾದ್ಯಂತ ದಸಂಸ ಸಂಘಟನೆ ಪ್ರಬಲವಾಗಿ ಕಟ್ಟುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಹಂತದಲ್ಲಿ 100 ಸಕ್ರಿಯ ಕಾರ್ಯಕರ್ತರ ತಂಡ ರಚಿಸುವಂತೆ ದಲಿತ ಸಂಘರ್ಷ ಸಮಿತಿ ಸದಸ್ಯರೂ ಆದ ಹುಮನಾಬಾದ್ ತಾಪಂ ಮಾಜಿ ಅಧ್ಯಕ್ಷ ರಮೇಶ ಡಾಕುಳಗಿ ಹೇಳಿದರು.
ಆಣದೂರ ಗ್ರಾಮದ ವೈಶಾಲಿನಗರದ ಬುದ್ಧ ವಿಹಾರದಲ್ಲಿ ಕರೆದಿದ್ದ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಮಟ್ಟದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಸಂಘಟನೆ ಬಲಿಷ್ಠವಾಗಿದ್ದರೆ ಮಾತ್ರ ದಲಿತರು, ಶೋಷಿತರ ಅಭಿವೃದ್ಧಿ ಸಾಧ್ಯ. ಹೀಗಾಗಿ ಗ್ರಾಪಂ ಮಟ್ಟದಲ್ಲೇ ಸಮಿತಿಯನ್ನು ಸದೃಢಗೊಳಿಸಲು ನಿರ್ಧರಿಸಲಾಗಿದೆ. ಪ್ರತಿ ಪಂಚಾಯಿತಿಯಲ್ಲಿ ಕನಿಷ್ಠ 500 ಜನರ ಸದಸ್ಯತ್ವ ನೋಂದಣಿ ಮಾಡಬೇಕು ಎಂದು ಸಲಹೆ ನೀಡಿದರು.
ದಲಿತರ ಕಲ್ಯಾಣಕ್ಕಾಗಿ ಮೀಸಲಿರುವ ಅನುದಾನದ ಸಮರ್ಪಕ ಬಳಕೆ ಮತ್ತು ದಲಿತರ ಮೇಲಿನ ದೌರ್ಜನ್ಯಗಳ ನಿಯಂತ್ರಣ ಬಗ್ಗೆ ರಾಜ್ಯ ಸರ್ಕಾರದ ಮೇಲೆ ಸಂಘಟನೆಗಳು ನಿಗಾ ಇಡಬೇಕು. ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಮೀಸಲಿರುವ 5000 ಕೋಟಿ ಅನುದಾನದಲ್ಲಿ ಈ ಭಾಗದ ದಲಿತ ಕುಟುಂಬಗಳಿಗೆ ನೇರವಾಗಿ ಆರ್ಥಿಕ ಧನಸಹಾಯ ಮಾಡುವ ಯೋಜನೆಗಳನ್ನು ಸರ್ಕಾರ ರೂಪಿಸಬೇಕು ಎಂದರು.
ಆ.24ರಿಂದ ನಾಲ್ಕು ದಿನ ದಾವಣಗೆರೆ ಜಿಲ್ಲೆ ಹರಿಹರದ ಪ್ರೊ.ಬಿ.ಕೃಷ್ಣಪ್ಪ ಸ್ಮಾರಕ ಕೇಂದ್ರದಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ದಸಂಸ ಪದಾಧಿಕಾರಿಗಳು ಮತ್ತು ಸಕ್ರಿಯ ಕಾರ್ಯಕರ್ತರ ಅಧ್ಯಯನ ಶಿಬಿರಕ್ಕೆ ಜಿಲ್ಲೆಯಿಂದ 100 ಜನರನ್ನು ಕರೆದೊಯ್ಯಲಾಗುವುದು ಎಂದು ತಿಳಿಸಿದರು.
ಸಮಿತಿಯ ನಾಗಣ್ಣ ಬಡಿಗೇರ ಯಾದಗಿರ, ಅರ್ಜುನ ಗೊಬ್ಬು ಕಲಬುರಗಿ, ರಾಮಣ್ಣ ಕಲದೇವನಹಳ್ಳಿ ಸುರಪುರ, ರಾಜಕುಮಾರ ಬನ್ನೇರ್, ಸುಭಾಷ ಜ್ಯೋತಿ, ರಂಜಿತಾ ಜೈನು, ಪ್ರಭುರಾವ್ ಚಿತ್ತಕೋಟಾ ಮಾತನಾಡಿದರು.
ಪೂಜ್ಯ ಭಂತೆ ಧಮ್ಮಾನಂದ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ರಮೇಶ ಮಂದಕನಳ್ಳಿ, ಘಾಳೆಪ್ಪ ಮೈಲೂರೆ, ಮಹಾದೇವ ಗಾಯಕವಾಡ, ಕೈಲಾಶ ಮೇಟಿ, ಮಾಣಿಕರಾವ್ ಮಾಡಗೂಳ, ಮಾರುತಿ ಜಗದಾಳೆ, ಸುಲೆಮ್ಮ ದಂಡೆ, ನಿತೀನ್ ಹೊಸಮನಿ, ಗೋಪಾಲ ಸಾಗರ, ಶಾಹುರಾಜ ಡಾಕುಳಗಿ ಇತರರಿದ್ದರು. ತೆಲಂಗಾಣದ ಕವಿ ಗದ್ದಾರ್ ಹಾಗೂ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಬುದ್ಧ ಹರಗೆ ಮಂದಕನಳ್ಳಿ ನಿಧನದ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜಿಲ್ಲಾ ಸಮಿತಿಗೆ ಪದಾಧಿಕಾರಿಗಳ ನೇಮಕ
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿಗೆ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಬಸವರಾಜ ಸಾಗರ ಶಮಶೀರನಗರ, (ಪ್ರಧಾನ ಸಂಚಾಲಕ), ಝರೆಪ್ಪ ರಾಂಪುರೆ, ಸುಧಾಕರ ಮಾಳಗೆ, ರಾಜಕುಮಾರ ಕಾಳೆಕ, ಬಾಬುರಾವ್ ಮಾಲೆ, ಮಾರುತಿ ಸಿಂಧೆ, ಉಮೇಶ ಭೋರಾಳೆ (ಸಂಘಟನಾ ಸಂಚಾಲಕರು), ಸಂಜುಕುಮಾರ ಬ್ಯಾಗಿ (ಖಜಾಂಚಿ), ಅಹ್ಮದ್ ಪಾಶಾ ಅಲಿಯಾಬಾದ್, ವಿಠ್ಠಲ್ ಲಾಡಕ್, ಓಂಪ್ರಕಾಶ ಮೋರೆ, ಧನಾಜಿ ಕಾಂಬ್ಳೆ, ತುಕಾರಾಮ ಸಿಂದಬಂದಗಿ (ಸದಸ್ಯರು) ಹಾಗೂ ಕಲ್ಯಾಣ ಕರ್ನಾಟಕದ ದಲಿತ ಕಲಾಮಂಡಳಿ ಸಂಚಾಲಕರಾಗಿ ಪ್ರಭುರಾವ್ ಚಿತ್ತಕೋಟಾ, ಜಿಲ್ಲಾ ಸಂಚಾಲಕರಾಗಿ ಸುಭಾಷ ಜ್ಯೋತಿ ಅವರನ್ನು ನೇಮಕ ಮಾಡಲಾಗಿದೆ.