ಸಕ್ಕರೆ ಸಚಿವರನ್ನು ಸಂಪುಟದಿಂದ ವಜಾಗೊಳಿಸಿ

Raithasangha
Published on

ಚಿತ್ರದುರ್ಗ: ಅನ್ನದಾತರ ಕುರಿತು ಎಳ್ಳಷ್ಟು ಕಾಳಜಿ ಇಲ್ಲದ ಸಕ್ಕರೆ ಸಚಿವರು ದುರಹಂಕಾರದ ಹೇಳಿಕೆ ನೀಡಿದ್ದಾರೆಂದು ಖಂಡಿಸಿ ರಾಜ್ಯ ರೈತಸಂಘದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಸಾಲ ಮನ್ನಾ ಆಸೆಗಾಗಿ ರೈತರು ಬರಗಾಲ ಎದುರು ನೋಡುತ್ತಾರೆಂದು ಸಚಿವ ಶಿವಾನಂದ್ ಪಾಟೀಲ್ ಹೇಳಿಕೆ ನೀಡಿದ್ದು, ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಮುಖ್ಯಮಂತ್ರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಯಾವೊಬ್ಬ ರೈತ ಸಾಲ ಮನ್ನಾಕ್ಕಾಗಿ ಬರಗಾಲ ಆಹ್ವಾನಿಸುವುದಿಲ್ಲ. ಆಳ್ವಿಕೆ ನಡೆಸಿದ ಯಾವುದೇ ರಾಜ್ಯ ಸರ್ಕಾರ ರೈತರಿಗೆ ಬಿತ್ತನೆ ಬೀಜ, ಗೊಬ್ಬರವನ್ನು ಈವರೆಗೂ ಉಚಿತವಾಗಿ ನೀಡಿಲ್ಲ. ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿಪಡಿಸಿಲ್ಲ. ಕೇಂದ್ರ ಸರ್ಕಾರ ಜಾರಿಗೊಳಿಸಿದ ಕನಿಷ್ಠ ಬೆಂಬಲ ಬೆಲೆಗೆ ಕಾಯ್ದೆ ರೂಪಿಸಿಲ್ಲ ಎಂದು ಅಳಲು ತೋಡಿಕೊಂಡರು.

ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಪ್ರತಿ ಬಾರಿಯೂ ನಷ್ಟ ಅನುಭವಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೆಲೆ ಸಿಗದ ವೇಳೆ ಹಣ್ಣು, ತರಕಾರಿ ಸೇರಿ ಇತರೆ ತೋಟಗಾರಿಕೆ ಬೆಳೆಗಳನ್ನು ತಿಪ್ಪೆ ಅಥವಾ ರಸ್ತೆಗೆ ಸುರಿದು ಸರ್ಕಾರದ ಮುಂದೆ ತಮ್ಮ ನೋವನ್ನು ತೋಡಿಕೊಂಡ ನಿದರ್ಶನಗಳೇ ಸಾಕಷ್ಟಿವೆ. ಹೀಗಿರುವಾಗ ಸಚಿವರ ಹೇಳಿಕೆ ರೈತ ವಿರೋಧಿಯಾಗಿದೆ ಎಂದು ಆಪಾದಿಸಿದರು.

ಮುಂಗಾರಿನಲ್ಲಿ ತೀವ್ರ ಬರ ಆವರಿಸಿ, ರಾಜ್ಯದ 212 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ರಾಜ್ಯ ಸರ್ಕಾರವೇ ಘೋಷಿಸಿದೆ. 33,700 ಕೋಟಿ ರೂ.ಗೂ ಅಧಿಕ ನಷ್ಟ ಉಂಟಾಗಿದೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಬೆಳೆ ನಷ್ಟ ಪರಿಹಾರವಾಗಿ 17,900 ಕೋಟಿ ರೂ. ಬಿಡುಗಡೆಗೊಳಿಸುವಂತೆ ಪ್ರಧಾನಿ ಅವರಿಗೂ ಮನವಿ ಮಾಡಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ಗೊತ್ತಿದ್ದರೂ ಅಸಂವಿಧಾನಿಕ ಪದ ಬಳಕೆ ಮಾಡಿ, ನಾಡಿನ ರೈತರನ್ನು ಅಪಮಾನ ಮಾಡಿರುವ ಪಾಟೀಲ್‌ರನ್ನು ಸಂಪುಟದಿಂದ ವಜಾಗೊಳಿಸಿ ಎಂದು ಕೋರಿದರು.

ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಎಂ.ಬಿ.ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ತಾಲೂಕು ಅಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ, ಮುಖಂಡರಾದ ಕೆ.ಪಿ.ಭೂತಯ್ಯ, ಹೊರಕೆರಪ್ಪ, ಮುದ್ದಾಪುರ ನಾಗರಾಜ್, ಬಸವ ಶಿವನಕೆರೆ ಮಂಜಣ್ಣ, ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net