

ಮೈಸೂರು: ಬಣ್ಣಾರಿ ಸಕ್ಕರೆ ಕಾರ್ಖಾನೆ ಎದುರು ತಕ್ಷಣ ಕಬ್ಬಿನ ತೂಕದ ಯಂತ್ರ ಅಳವಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.
ಟ್ರಾೃಕ್ಟರ್, ಕಾಲ್ನಡಿಗೆ ಮೂಲಕ ಸಿದ್ಧಾರ್ಥನಗರದ ಜಿಲ್ಲಾಡಳಿತ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬು ಪೂರೈಕೆ ಮಾಡುವ ರೈತರಿಗೆ ಸಕ್ಕರೆ ಕಾರ್ಖಾನೆಗಳಿಂದ ಮೋಸ ಆಗುತ್ತಿದೆ. ಇದನ್ನು ತಡೆಯುವಲ್ಲಿ ವಿಫಲವಾಗಿರುವ ಸರ್ಕಾರವು, ಬಣ್ಣಾರಿ ಸಕ್ಕರೆ ಕಾರ್ಖಾನೆ ಸೇರಿದಂತೆ ಎಲ್ಲ ಸಕ್ಕರೆ ಕಾರ್ಖಾನೆಗಳ ಮುಂದೆ ತೂಕದ ಯಂತ್ರ ಅಳವಡಿಸಿಲ್ಲ. ತಕ್ಷಣ ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ ಕೇವಲ 3295 ರೂ. ದರ ನಿಗದಿಪಡಿಸಲಾಗಿದೆ. ಕಟಾವು, ಸಾಗಣೆ ವೆಚ್ಚ ಸೇರಿದಂತೆ ಎಲ್ಲ ಖರ್ಚು ಕಳೆದುಕೊಂಡು 2000 ರೂ. ಮಾತ್ರ ರೈತರಿಗೆ ದೊರೆಯುತ್ತಿದೆ. ಉತ್ಪಾದನಾ ವೆಚ್ಚ ಜಾಸ್ತಿ ಆಗಿರುವುದರಿಂದ ರಾಜ್ಯ ಸಲಹಾ ಬೆಲೆ ಕಾಯ್ದೆ ಅಡಿಯಲ್ಲಿ ರಾಜ್ಯ ಸರ್ಕಾರ ಪ್ರತಿ ಟನ್‌ಗೆ 1500 ರೂ. ಹೆಚ್ಚುವರಿ ದರ ನೀಡಬೇಕು ಎಂದು ಆಗ್ರಹಿಸಿದರು.
ಕಬ್ಬಿನ ಕಟಾವು, ಸಾಗಣೆಯನ್ನು ಕಾರ್ಖಾನೆ ಮಂಡಳಿ ವಹಿಸಿಕೊಳ್ಳುತ್ತಿಲ್ಲ. ಕಾರ್ಖಾನೆ ಮಾಲೀಕರಿಗೆ ಇದನ್ನು ವಹಿಸಬೇಕು. ಕಬ್ಬಿನ ಇಳುವರಿಯಲ್ಲಿ ಮೋಸ ಮಾಡುತ್ತಿದ್ದು, ತಜ್ಞರ ಸಮಿತಿ ನೇಮಕ ಮಾಡಿ ಈ ಮೋಸ ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಮಾತನಾಡಿ, ಕೇಂದ್ರ ಸರ್ಕಾರದ ಎಫ್‌ಆರ್‌ಪಿಯೊಂದಿಗೆ ರಾಜ್ಯ ಸರ್ಕಾರವು ಹೆಚ್ಚುವರಿ ಆಗಿ ಬೆಲೆ ನಿಗದಿ ಮಾಡಿ 3500 ಬೆಲೆಗೆ ಭತ್ತ ಖರೀದಿಗೆ ಆದೇಶ ನೀಡಬೇಕು. ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರ ತೆರೆಯಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು.
ಭತ್ತ ಖರೀದಿ ಕೇಂದ್ರಕ್ಕೆ ಸುಲಭವಾಗಿ ಪೂರೈಕೆ ಮಾಡಲು ನಿಯಮ ರೂಪಿಸಬೇಕು. ಭತ್ತ ಬೆಳೆಗಾರರಿಗೆ ಪೂರೈಕೆ ಮಾಡಲು ಹೆಚ್ಚಿನ ಷರತ್ತು ಗಳ ವಿಧಿಸಬಾರದು. ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ವಿಸ್ತರಿಸಬೇಕು. ನಂಜನಗೂಡು ತಾಲೂಕಿನ ಕೃಷ್ಣಾಪುರ, ಸಿದ್ದಯ್ಯನಹುಂಡಿ ಗ್ರಾಮಗಳ ಕೆರೆಗಳಿಗೆ ಹಾಗೂ ಚಾಮರಾಜನಗರ ಜಿಲ್ಲೆ ಮಲಿಯೂರಿನ ರಾಮನಕೆರೆ, ಗುಂಡ್ಲುಪೇಟೆ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಬೇಕು. ಸಣ್ಣ ನೀರಾವರಿ ಮತ್ತು ಕಾವೇರಿ ನೀರಾವರಿ ನಿಗಮ ಸೂಕ್ತ ಡಿಪಿಆರ್ ತಯಾರಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗ್ರಾಮೀಣ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಬೆಳೆ ನಷ್ಟ ಪರಿಹಾರ ಅಂದಾಜು ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. 8 ಲಕ್ಷ ಬಿಪಿಎಲ್ ಪಡಿತರ ಕಾರ್ಡ್ ವಜಾ ಮಾಡಲು ಮುಂದಾಗಿದ್ದು, ಅರ್ಹ ಫಲಾನುಭವಿಗಳಿಗೆ ತೊಂದರೆ ಆಗದಂತೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬ್ಯಾಂಕ್‌ಗಳಲ್ಲಿ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಕೇಳಬಾರದು. ಕೃಷಿ ಸಾಲಕ್ಕಾಗಿ ಚಿನ್ನವನ್ನು ಅಡಮಾನ ಮಾಡಿರುವ ರೈತರ ಹತ್ತಿರ ನವೀಕರಣ ಮಾಡಲು ಅಸಲು, ಬಡ್ಡಿ ಕೇಳಬಾರದು. ಕೇವಲ ಬಡ್ಡಿ ಕಟ್ಟಿಸಿಕೊಂಡು ಸಾಲವನ್ನು ನವೀಕರಿಸಬೇಕು.
ಕಾಡು ಪ್ರಾಣಿಗಳಿಂದ ಆದಂತಹ ಬೆಳೆ ನಷ್ಟಕ್ಕೆ ವೈಜ್ಞಾನಿಕವಾಗಿ ಬೆಳೆ ನಷ್ಟ ನೀಡಬೇಕು. ರೈತನ ಹೊಲದಲ್ಲಿನ ಬೆಳೆಗೆ ವಿಮೆ ನಿರ್ಧಾರ ಆಗಬೇಕು. ಫೈನಾನ್ಸ್ ಕಂಪನಿಗಳು ರೈತರ ಸಾಲಕ್ಕೆ ಟ್ಯಾಕ್ಟರ್ ಜಪ್ತಿ ಮಾಡುವ ನಿಯಮಗಳು ಬದಲಾಗಬೇಕು. ಜಿಲ್ಲಾ ಉಸ್ತುವಾರಿ ಸಚಿವರು, ಕೃಷಿ ಸಮಸ್ಯೆಗಳ ಬಗ್ಗೆ ಚರ್ಚಿಸಲು ತಕ್ಷಣವೇ ರೈತರ ಸಭೆ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಹಂಡುವಿನಹಳ್ಳಿ ರಾಜು, ಕೆರೆಹುಂಡಿ ರಾಜಣ್ಣ, ಹನುಮಯ್ಯ, ವಳಗೆರೆ ಗಣೇಶ್, ಮಲಿಯೂರು ಮಹೇಂದ್ರ, ಅಂಗಡಿ ಸತೀಶ್, ಎಚ್.ಗುಂಡ್ಲಚಿದಂಬರ, ಸಿದ್ದರಾಮಪ್ಪ, ದೇವನೂರು ನಾಗೇಂದ್ರ, ಮುದ್ದಹಳ್ಳಿ ಮಧು, ಅಂಡುವಿನಹಳ್ಳಿ ಮರಿಸ್ವಾಮಿ, ಚೇತನ್, ಕೆರೆಹುಂಡಿ ಶಿವಣ್ಣ ಇನ್ನಿತರರಿದ್ದರು.