

ಬಾಗಲಕೋಟೆ: ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್‌ಗೆ ೩೫೦೦ ರೂ. ಬೆಲೆ ನಿಗದಿಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವ ವರೆಗೆ ಜಿಲ್ಲೆಯಲ್ಲಿ ಯಾವುದೇ ಕಾರ್ಖಾನೆ ಆರಂಭಿಸಬಾರದು. ಒಂದು ವೇಳೆ ಆರಂಭಿಸಿದ್ದೆ ಆದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಲ್ಲಿ ತಾವೆಲ್ಲ ಜವಾಬ್ದಾರರು ಎಂದು ಕಬ್ಬು ಬೆಳೆಗಾರರು, ರೈತ ಸಂಘದ ಮುಖಂಡರು ನೇರವಾಗಿ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ರೈತರ ಸಭೆಯಲ್ಲಿ ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವಿಕೆ, ಬೆಲೆ ನಿಗದಿ, ಬಾಕಿ ಪಾವತಿ ಕುರಿತು ಗಂಭೀರ ಚರ್ಚೆ ನಡೆಯಿತು. ಕಾರ್ಖಾನೆ ಮಾಲೀಕರ ಪರವಾಗಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ನಿಲ್ಲಬಾರದು. ರೈತರ ಪರವಾಗಿ ವರ್ತಿಸಬೇಕು. ಪ್ರಸಕ್ತ ವರ್ಷ ಪ್ರತಿಟನ್‌ಗೆ ೩೫೦೦ ರೂ. ಬೆಲೆ ನಿಗದಿಗೊಳಿಸಬೇಕು, ಬೆಲೆ ನಿಗದಿಯಾಗುವ ವರೆಗೆ ಕಾರ್ಖಾನೆ ಆರಂಭಿಸುವಂತ್ತಿಲ್ಲ. ಹಳೇ ಬಾಕಿ ಪೂರ್ಣವಾಗಿ ಪಾವತಿಸಬೇಕು. ಆಕಸ್ಮಿಕ ಕಾರ್ಖಾನೆ ಶುರುವಿಟ್ಟುಕೊಂಡರೆ ಕಾರ್ಖಾನೆಗಳ ವಿರುದ್ಧ ಪ್ರತಿಭಟನೆ, ಹೋರಾಟ ನಡೆಯಲಿದೆ ಎಂದು ತಿಳಿಸಿದರು.
ಮುಧೋಳದಲ್ಲಿ ಎರಡು ಟ್ಯಾಕ್ಟರ್, ೪ ಟ್ರ‍್ಯಾಲಿ ಉರುಳಿಸಿದ್ದು ನಾವಲ್ಲ. ಅದನ್ನು ಕಾರ್ಖಾನೆಯವರು ಮಾಡಿದ್ದಾರೆ. ಸುಖಾಸುಮ್ಮನೇ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ರೈತ ಮುಖಂಡರು ದೂರಿದರು.
ಈ ವೇಳೆ ಜಿಲ್ಲಾಽಕಾರಿ ಸುನೀಲಕುಮಾರ ಮಾತನಾಡಿ, ಅ.೨೫ ಸಮಯ ಕೊಡಬೇಕು. ತಮ್ಮ ಬೇಡಿಕೆ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು. ಬೆಲೆ ನಿಗದಿ ಸರ್ಕಾರ ನೇತೃತ್ವದಲ್ಲಿ ನಡೆಯಲಿದೆ. ಅನೇಕ ಕಾರಣಗಳಿಂದ ಕಾನೂನು ಸುವ್ಯವಸ್ಥೆ ಸಮಸ್ಯೆ ಬರುತ್ತಿದೆ. ರೈತರನ್ನು ವಿಶ್ವಾಸ ತೆಗೆದುಕೊಳ್ಳಿ ಅಂತ ಕಾರ್ಖಾನೆ ಮಾಲೀಕರಿಗೆ ಸೂಚನೆ ನೀಡುತ್ತೇನೆ. ಯಾರು ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದು ತಿಳಿಸಿದರು.
ರೈತ ಸಂಘದ ಮುಖಂಡರಾದ ಸಿದ್ದಪ್ಪ ಬಳಗಾನೂರ, ಈರಪ್ಪ ಹಂಚಿನಾಳ, ಬಸವಂತಪ್ಪ ಕಾಂಬಳೆ, ವಿಠ್ಠಲ ತುಂಬರಮಟ್ಟಿ, ಸುರೇಶ ಚಿಂಚಲಿ, ಸಂಗಪ್ಪ ನಾಗರೆಡ್ಡಿ, ಪರಶುರಾಮ ಮಂಟೂರ, ರಾಜು ನದಾಫ ಸಿದ್ದಪ್ಪ ಬನಜಾಗೋಳ ಇದ್ದರು.
==========
ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಮಾತನಾಡಿ, ಈಗಾಗಲೇ ಕಾರ್ಖಾನೆ ಮಾಲೀಕರೊಂದಿಗೆ ಸಭೆಯಾಗಿದೆ. ಇದೀಗ ರೈತರೊಂದಿಗೆ ಸಭೆ ನಡೆಸಲಾಗಿದೆ. ಜಿಲ್ಲೆಯಲ್ಲಿ ನಾಲ್ಕು ಕಾರ್ಖಾನೆಗಳು ಕಬ್ಬು ನುರಿಸುತ್ತೀವೆ. ಕಬ್ಬು ಬೆಳೆಗಾರರು ಬೇಡಿಕೆ ತಿಳಿಸಿದ್ದಾರೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸರ್ಕಾರೊಂದಿಗೆ ಸಭೆ ನಡೆಯಲಿದೆ. ಸದ್ಯ ಕಾನೂನು ಸುವ್ಯವಸ್ಥೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಕಾರ್ಖಾನೆಯವರಿಗೆ ಸೂಚಿಸುತ್ತೇನೆ. ಸರ್ಕಾರ ನಿರ್ಧಾರದಂತೆ ಬೆಲೆ ನಿಗದಿಯಾಗಲಿದೆ. ಹೆಚ್ಚುವರಿ ಬಿಲ್ ಬಾಕಿ ಪಾವತಿಸಲು ಕಾರ್ಖಾನೆ ಮಾಲೀಕರಸಭೆಯಲ್ಲಿ ತಿಳಿಸಲಾಗಿದೆ. ಎಫ್ಆರ್‌ಪಿಗ್ಗಿಂತ ಹೆಚ್ಚಿನ ಬೆಲೆ ಬಗ್ಗೆ ಸರ್ಕಾರದೊಂದಿಗೆ ಬೆಳೆಗಾರರು ಮಾತನಾಡಬೇಕು. ಕಾರ್ಖಾನೆ ಬಾಕಿ ಉಳಿಸಿಕೊಂಡಿರುವ ಬಗ್ಗೆ ಪರಿಶೀಲನೆ ಮಾಡಲು ನಮ್ಮ ಆಹಾರ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದ್ದೇನ ತಿಳಿಸಿದರು.
ರೈತ ಮುಖಂಡ ಈರಪ್ಪ ಹಂಚಿನಾಳ ಮಾತನಾಡಿ, ಕಾರ್ಖಾನೆ ಮಾಲೀಕರು ರೈತರ ಬೇಡಿಕೆ ಈಡೇರಿಸುವಂತೆ ಸರ್ಕಾರ ಸೂಚನೆ ನೀಡಬೇಕು. ಬೆಲೆ ನಿಗದಿಗೊಳಿಸುವವರೆಗೆ ಕಾರ್ಖಾನೆ ಆರಂಭಿಸಬಾರದು. ಪೊಲೀಸರು ಕಾರ್ಖಾನೆ ರಕ್ಷಣೆ ಮಾಡುವದಲ್ಲ. ನಮ್ಮ ರೈತರ ರಕ್ಷಣೆ ಮಾಡಬೇಕು. ನಮ್ಮ ಸಹನೆ, ತಾಳ್ಮೆ ದುರುಪಯೋಗ ಪಡಿಸಿಕೊಳ್ಳಬಾರದು. ಬಾಕಿ ಪಾವತಿಗೆ ಕ್ರಮ ತೆಗೆದುಕೊಳ್ಳಬೇಕು ಎಂದರು.