ಸಕಾಲದಲ್ಲಿ ಆರೋಗ್ಯ ತಪಾಸಣೆ ಅವಶ್ಯ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿದ್ದಪ್ಪ ಅಭಿಮತ

2
Published on

ನೆಲಮಂಗಲ: ರಾಸುಗಳಲ್ಲಿ ರೋಗ ತಡೆಗಟ್ಟಿ ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ತಪಾಸಣಾ ಶಿಬಿರಗಳು ಸಹಕಾರಿ ಎಂದು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿದ್ದಪ್ಪ ತಿಳಿಸಿದರು.

ತಾಲೂಕಿನ ಬೊಮ್ಮನಹಳ್ಳಿಯ ಹಾಲು ಉತ್ಪಾದಕ ಸಹಕಾರ ಸಂಘದ ಆವರಣದಲ್ಲಿ ರೋಟರಿ ಸಂಸ್ಥೆ, ರೋಟರಿ ಟ್ರಸ್ಟ್, ಪಶು ಸಂಗೋಪನಾ ಇಲಾಖೆ ಹಾಗೂ ಬೊಮ್ಮನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಬರಡು ರಾಸುಗಳಿಗೆ ಉಚಿತ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.

ಮೂಕ ಪ್ರಾಣಿಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಹಸು, ಮೇಕೆ, ಕುರಿಗಳಿಗೆ ಸರಿಯಾದ ಸಮಯದಲ್ಲಿ ಆರೋಗ್ಯ ತಪಾಸಣೆ ಜತೆಗೆ ತಪ್ಪದೆ ಜೀವ ವಿಮೆ ಮಾಡಿಸಬೇಕು. ಗುಣಮಟ್ಟದ ಮೇವು ನೀಡಬೇಕು ಎಂದು ಸಲಹೆ ನೀಡಿದರು.

ಹೈನುಗಾರಿಕೆಯನ್ನು ಆರಂಭಿಸಿರುವ ಲಕ್ಷಾಂತರ ಮಂದಿ ರೈತರು ಅರ್ಥಿಕವಾಗಿ ಸಬಲರಾಗಿದ್ದಾರೆ. ಆದ್ದರಿಂದ ಸಾಕು ಪ್ರಾಣಿಗಳಿಗೆ ಸಾಕಾಲದಲ್ಲಿ ಲಸಿಕೆ ಹಾಕಿಸಬೇಕು. ಪ್ರಾಣಿಗಳಲ್ಲಿ ಯಾವುದೇ ಅನಾರೋಗ್ಯ ಸಮಸ್ಯೆ ಇದ್ದರೂ ವೈದ್ಯರಿಂದ ಚಿಕಿತ್ಸೆ ಕೊಡಿಸಬೇಕು ಎಂದರು.

ರೋಟರಿ ಸಂಸ್ಥೆ ಅಧ್ಯಕ್ಷ ವಿ.ಆರ್.ಸ್ವಾಮಿ ಮಾತನಾಡಿ, ಸಂಸ್ಥೆ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡಿದೆ. ರೈತರ ರಾಸುಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬರಡು ರಾಸುಗಳಿಗೆ ಉಚಿತ ಪಶುಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.

ತಾಲೂಕಿನ ಹುರುಳಿಹಳ್ಳಿ, ವೀರರಾಘವನಪಾಳ್ಯ, ಬೂದಿಹಾಲ್, ಗಂಡರಗೊಳ್ಳಿಪುರ ಬೊಮ್ಮನಹಳ್ಳಿಯ 350ಕ್ಕೂ ಹೆಚ್ಚು ಹಸುಗಳು, ಬರಡು ರಾಸುಗಳು, ಕರುಗಳ ಆರೋಗ್ಯ ತಪಾಸಣೆ ಮಾಡಿ, ಶ್ವಾನಗಳಿಗೂ ರೇಬಿಸ್ ಚುಚ್ಚುಮದ್ದು ನೀಡಲಾಗಿದೆ. ಸುಮಾರು 50 ಸಾವಿರ ಮೌಲ್ಯದ ಔಷಧ ವಿತರಣೆ ಮಾಡಲಾಗಿದೆ. ಜತೆಗೆ ಕರುಗಳ ಪ್ರದರ್ಶನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಎಂದು ರೋಟರಿ ಸಂಸ್ಥೆ ಕಾರ್ಯದರ್ಶಿ ಕೆಂಪೇಗೌಡ ಮಾಹಿತಿ ನೀಡಿದರು.

ರೋಟರಿ ಟ್ರಸ್ಟ ಅಧ್ಯಕ್ಷ ಎಂ.ಹರೀಶ್‌ಕುಮಾರ್, ರೋಟರಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಚ್.ಜಿ.ರಾಜು, ಖಚಾಂಜಿ ಎಂ.ಟಿ.ನವೀನ್‌ಕುಮಾರ್, ಸಹಕಾರ್ಯದರ್ಶಿ ಎಲ್.ಕುಮಾರ್, ಮಾಜಿ ಅಧ್ಯಕ್ಷ ಟಿ.ನಾಗರಾಜು, ಮುನಿರಾಜಯ್ಯ, ಸಿ.ಜಿ.ಮಂಜುನಾಥ್‌ಗೌಡ, ಹೆಲ್ತ್ ಚೇರ್ಮನ್ ಆರ್.ಬಸವರಾಜು, ನಿರ್ದೇಶಕರಾದ ಮುರಳಿ, ಚನ್ನಕೇಶವ್, ಹನುಮಂತರಾಜು, ಲೋಕೇಶ್, ಶಿವರಾಮ್, ಎನ್.ಜಿ.ನಾಗರಾಜು, ಎಸ್.ಗಂಗರಾಜು, ಹಿರಿಯ ಪಶುವೈದ್ಯಾಧಿಕಾರಿಗಳಾದ ನಾಗರಾಜು, ಭರತ್, ಪಶುವೈದ್ಯ ಸಾಧಿಕ್ ಖಾನ್, ಸುಪ್ರಿಯಾ, ಗೌತಮ್, ಹಿಜಿಲಾ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net