ಸಕಾಲಕ್ಕೆ ಸಿಸಿ ರಸ್ತೆ, ಚರಂಡಿ ನಿರ್ಮಾಣ ಪೂರ್ಣಗೊಳಿಸಿ

12 HANUR 2
ಮಣಗಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಆರ್.ನರೇಂದ್ರ ಭೂಮಿಪೂಜೆ ನೆರವೇರಿಸಿದರು.
Published on

ಹನೂರು: ಒತ್ತುವರಿಯಾಗಿರುವ ಜಾಗ ತೆರೆವುಗೊಳಿಸುವ ಮೂಲಕ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಶಾಸಕ ಆರ್.ನರೇಂದ್ರ ಸೂಚಿಸಿದರು.

ತಾಲೂಕಿನ ಮಣಗಳ್ಳಿ ಗ್ರಾಮದಲ್ಲಿ ನೀರಾವರಿ ಇಲಾಖೆಯ ಎಸ್‌ಇಪಿ ಯೋಜನೆಯಡಿ 10 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

ಮಣಗಳ್ಳಿ ಗ್ರಾಮದ ವಿವಿಧ ಬಡಾವಣೆಗಳಲ್ಲಿ ಈಗಾಗಲೇ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಿಸಲಾಗಿದೆ. ಆದರೆ ಕೆಲವು ಬಡಾವಣೆಗಳಲ್ಲಿ ಅನುದಾನ ಕೊರತೆಯಿಂದ ಸಾಧ್ಯವಾಗಿರಲಿಲ್ಲ. ಇದೀಗ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುತ್ತಿದೆ. ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಳ್ಳುವುದರ ಮೂಲಕ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಈ ಬಗ್ಗೆ ಅಧಿಕಾರಿಗಳು ಕಾಮಗಾರಿಯ ವೇಳೆ ಪರಿಶೀಲನೆ ನಡೆಸಬೇಕು. ಗ್ರಾಮಸ್ಥರು ಅಗತ್ಯ ಸಹಕಾರ ನೀಡಬೇಕು ಎಂದು ತಿಳಿಸಿದರು.

ಭೂಮಿಪೂಜೆ ನೆರವೇರಿಸುವ ವೇಳೆ ರಸ್ತೆ ಮಧ್ಯೆದಲ್ಲಿ ಅಳವಡಿಸಲಾಗಿದ್ದ ನಲ್ಲಿ ವೀಕ್ಷಿಸಿದ ಶಾಸಕರು, ರಸ್ತೆ ನಿರ್ಮಾಣಕ್ಕೆ ನಲ್ಲಿ ತೊಡಕಾಗಲಿದೆ. ಹೀಗಾಗಿ ನಲ್ಲಿ ತೆರವುಗೊಳಿಸಿ, ಬೇರೆಡೆಗೆ ಅಳವಡಿಸಬೆಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಳಿಕ ಗ್ರಾಮದಲ್ಲಿ ಅಪೂರ್ಣಗೊಂಡಿರುವ ಡಾ.ಅಂಬೇಡ್ಕರ್ ಸಮುದಾಯ ಭವನಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಭವನ ನಿರ್ಮಾಣ ಪೂರ್ಣಗೊಳಿಸಲು ಈಗಾಗಲೇ ಅಗತ್ಯ ಅನುದಾನ ನೀಡಲಾಗಿದೆ. ಆದ್ದರಿಂದ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಗ್ರಾಪಂ ಸದಸ್ಯ ಸಿದ್ದರಾಜು, ನೀರಾವರಿ ಇಲಾಖೆಯ ಎಇಇ ರಾಮಕೃಷ್ಣ, ಎಇ ನವೀನ್, ಗ್ರಾಮದ ಮುಖಂಡರಾದ ಕೆಂಪಯ್ಯ, ಗಂಟಯ್ಯ, ಪುಟ್ಟಸ್ವಾಮಿ, ಮಹಾಲಿಂಗ, ಶೇಖರ್, ಗೋವಿಂದ, ಉದ್ದನೂರು ಸಿದ್ದರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net