

ಎಚ್.ಡಿ.ಕೋಟೆ: ಹದಿನೈದು ದಿನಗಳಿಂದ ಆರ್.ಟಿ.ಸಿ. ದೊರಕುತ್ತಿಲ್ಲ ಎಂದು ಆರೋಪಿಸಿ ರೈತರು ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ರೈತ ಪರ್ವ ಸಂಘಟನೆ ರಾಜ್ಯ ಉಪಾಧ್ಯಕ್ಷ ನವೀನಗೌಡ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ ರೈತರು, ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಆರ್‌ಟಿಸಿ ಕೊಡುವಂತೆ ಸಿಬ್ಬಂದಿ ಕೇಳಿದರೆ ಸರ್ವರ್ ಸಮಸ್ಯೆ ಎಂಬ ಉತ್ತರ ನೀಡುತ್ತಾರೆ. ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದರೆ ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಅಲೆದಾಡಿಸುತ್ತಾರೆ. ಖಾತೆ, ಬ್ಯಾಂಕ್ ಸಾಲ ಸೌಲಭ್ಯಕ್ಕೆ ಆರ್‌ಟಿಸಿ ನೀಡಬೇಕಾಗಿದ್ದು, ಈಗ ಯಾವುದೇ ಕೆಲಸ ಮಾಡಲು ಆಗುತ್ತಿಲ್ಲ. ಅಲ್ಲದೆ ಗ್ರಾಮ ಲೆಕ್ಕಾಧಿಕಾರಿಗಳು ಕಂದಾಯ ಕಟ್ಟಿಸಿಕೊಳ್ಳುತ್ತಿಲ್ಲ. ನಿತ್ಯ ದನಕರುಗಳನ್ನು ಜಮೀನಿನಲ್ಲಿ ಕಟ್ಟಿಹಾಕಿ ಆರ್‌ಟಿಸಿಗಾಗಿ ಅಲೆಯುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡರು.
ತಾಲೂಕು ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ರೈತರು ಹಾಗೂ ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ. ಇವರ ನಡವಳಿಕೆ ಇದೇ ರೀತಿ ಮುಂದುವರಿದರೆ ಸಂಘಟನೆ ವತಿಯಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ನವೀನ್‌ಗೌಡ ಎಚ್ಚರಿಕೆ ನೀಡಿದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಪಿ.ಎಸ್.ಮಹೇಶ್, 3 ದಿನಗಳ ಹಿಂದೆ ತಾಲೂಕಿಗೆ ಹೊಸದಾಗಿ ಬಂದಿದ್ದು, ಸಿಬ್ಬಂದಿಯೊಂದಿಗೆ ಸಭೆ ನಡೆಸಿ ಸೂಕ್ತ ತಿಳಿವಳಿಕೆ ನೀಡಲಾಗುವುದು. ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಅಂತ್ಯವಾಯಿತು.
ಪ್ರತಿಭಟನೆಯಲ್ಲಿ ರೈತರಾದ ಮೂಗನಹುಂಡಿ ಕಾಳೇಗೌಡ, ಸಣ್ಣಸ್ವಾಮಿನಾಯಕ, ಕೃಷ್ಣದಾಸ, ಸಣ್ಣನಾಯಕ, ಬಸವರಾಜು ನಾಯಕ, ಎಂ.ಎಸ್. ಕೂಸಪ್ಪ, ಮಹಾದೇವಪ್ಪ ಇದ್ದರು.