

ಮುಂಡರಗಿ: ತಾಲೂಕಿನಲ್ಲಿ ನಿರೀಕ್ಷೆಗಿಂತ ಹೆಚ್ಚು ಮಳೆಯಾಗುತ್ತಿದ್ದು, ಕೃಷಿ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ತ್ವರಿತವಾಗಿ ಬೆಳೆ ಸಮೀಕ್ಷೆ ಕಾರ್ಯ ಕೈಗೊಂಡು ಸಕಾಲದಲ್ಲಿ ವರದಿ ಸಲ್ಲಿಸಬೇಕು. ಈ ಬಗ್ಗೆ ಕಾರ್ಯಪ್ರವೃತರಾಗಬೇಕು ಎಂದು ತಾ.ಪಂ. ಆಡಳಿತಾಧಿಕಾರಿ ಜಿಯಾವುಲ್ಲಾ ಕೆ. ಸೂಚಿಸಿದರು.
ಪಟ್ಟಣದ ತಾ.ಪಂ. ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾ.ಪಂ. ತ್ರೖೆಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಗ್ರ ಕೃಷಿಗೆ ಪೂರಕವಾಗಿ ರೈತರಿಗೆ ಆದಾಯ ತರುವಂತಹ ರೇಷ್ಮೆ ಬೆಳೆಯಲು ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಬೇಕು. ಸರ್ಕಾರದಿಂದ ಸಿಗುವ ಸೌಲಭ್ಯ ಕೊಡಿಸಬೇಕು ಎಂದು ರೇಷ್ಮೆ ಇಲಾಖೆ ಅಧಿಕಾರಿಗೆ ಸೂಚಿಸಿದರು. ಮೀನುಗಾರಿಕೆ ಇಲಾಖೆಯಿಂದ ಸಿಗುವ ಸೌಲಭ್ಯ ಮತ್ತು ಮೀನು ಸಾಕಾಣಿಕೆಗೆ ರೈತರಿಗೆ ಹೆಚ್ಚಿನ ಮಾಹಿತಿ ನೀಡಲು ಅಧಿಕಾರಿಗಳಿಗೆ ಆದೇಶಿಸಿದರು.
ತಹಸೀಲ್ದಾರ್ ಆಶಪ್ಪ ಪೂಜಾರಿ ಮಾತನಾಡಿ, 75ನೇ ಸ್ವಾತಂತ್ರ್ಯೊತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ತಾಲೂಕಿನ ಸರ್ಕಾರಿ ನೌಕರರಿಗೆ ಆ.5, 6 ಹಾಗೂ 8ರಂದು ಕ್ರೀಡಾಕೂಟ ಏರ್ಪಡಿಸಲಾಗಿದೆ. ನೌಕರರು ಕಡ್ಡಾಯವಾಗಿ ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳಬೇಕು. ಪಟ್ಟಣದಲ್ಲಿ ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ನಡೆದಿದ್ದು, ಎಲ್ಲರೂ ಕಡ್ಡಾಯವಾಗಿ ಆಧಾರ್ ಲಿಂಕ್ ಮಾಡಿಸಬೇಕು ಎಂದು ತಿಳಿಸಿದರು.
ತಾಲೂಕಿನಲ್ಲಿ ಈವರೆಗೂ 190 ಮಿ.ಮೀ. ಮಳೆಯಾಗಿದ್ದು, 48 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ವಿವಿಧ ಬೆಳೆಗಳಲ್ಲಿ 5,345 ಹೆಕ್ಟೇರ್ ಪ್ರದೇಶದಷ್ಟು ಬೆಳೆ ಹಾನಿಯಾಗಿದೆ. ಮಳೆ ನಿಂತ ಮೇಲೆ ಕೃಷಿ ಹೊಂಡ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗುತ್ತದೆ. ಅಕ್ಟೋಬರ್ನಲ್ಲಿ ತಾಡಪತ್ರಿ ವಿತರಣೆ ಮಾಡಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶಮೂರ್ತಿ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ ಮಾತನಾಡಿ, ಎಲ್ಲ ಇಲಾಖೆಗಳ ಮುಖ್ಯಸ್ಥರು ಪರಿಶಿಷ್ಟ ಜಾತಿ, ಪಂಗಡದ ಅನುದಾನ ಹಂಚಿಕೆ ಮತ್ತು ಬಳಕೆಯ ಕುರಿತು ಮಾಹಿತಿ ನೀಡಬೇಕು. ಈ ಕುರಿತು ಹೊಸ ನಮೂನೆಯ ವಿವರದ ಅರ್ಜಿ ಕಳಿಸಲಾಗಿದ್ದು, ವಿವರ ಕಳಿಸದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ತಾ.ಪಂ. ಆಡಳಿತಾಧಿಕಾರಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ನೀಡಿರುವ ನಿರ್ದೇಶನಗಳನ್ನು ಎಲ್ಲ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಾ.ಪಂ. ಇಒ ಎಸ್.ಎಸ್. ಕಲ್ಮನಿ ತಿಳಿಸಿದರು. ಬಿಇಒ ಜಿ.ಎಸ್. ಅಣ್ಣಿಗೇರಿ, ಎಸ್.ವಿ. ತಿಗರಿಮಠ, ರವೀಂದ್ರ ಮರಿಬಸಣ್ಣವರ, ಸಾಮಾಜಿಕ ಅರಣ್ಯಾಧಿಕಾರಿ ರಂಗಣ್ಣವರ, ಅಕ್ಷರದಾಸೋಹ ಸಹಾಯಕ ನಿರ್ದೇಶಕಿ ರಂಜನಾ ತಳಗೇರಿ, ಸುವರ್ಣ ಕೋಟಿ, ಆಕಾಶ, ಪಾಂಡುರಂಗ ತಳವಾರ, ಮಹಾದೇವಪ್ಪ, ಶಿವಾನಂದ ಲಮಾಣಿ, ಸಿದ್ದಪ್ಪ, ವಿನಯ ಬಿ.ಎಂ., ವಿಶ್ವನಾಥ ಚನ್ನ ಇತರೆ ಅಧಿಕಾರಿಗಳು ಇದ್ದರು.