

ಸೋಮವಾರಪೇಟೆ: ತಾಲೂಕಿನ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದಲ್ಲಿ ಸಕಾಲದಲ್ಲಿ ಚಿಕಿತ್ಸೆ ಕೊಡಿಸದ ಕಾರಣ ಹಸುಗೂಸು ಭಾನುವಾರ ರಾತ್ರಿ ಮೃತಪಟ್ಟಿದೆ.
ಕುಸುಬೂರು ಗ್ರಾಮದಿಂದ ಕರ್ಕಳ್ಳಿ ಗ್ರಾಮ ಸಂಪರ್ಕಿಸುವ ರಸ್ತೆಯಲ್ಲಿ ಒಣಗಿದ ಮರದೊಂದಿಗೆ ಬೈನೆ ಮತ್ತು ಸಿಲ್ವರ್ ಮರ ಬಿದ್ದು ಸಂಚಾರಕ್ಕೆ ತೊಡಕಾಗಿತ್ತು. ಶನಿವಾರ ಮರ ಬಿದ್ದಿದ್ದರೂ ತೋಟದ ಮಾಲೀಕರು ಮರ ತೆಗೆಸಿರಲಿಲ್ಲ. ಭಾನುವಾರದಂದು ಗ್ರಾಮದ ತೇಜಸ್ ಮತ್ತು ರಕ್ಷಿತಾ ಎಂಬುವರ 1 ತಿಂಗಳು 10 ದಿನದ ಮಗುವಿಗೆ ಉಸಿರಾಟಕ್ಕೆ ತೊಂದರೆಯಾದ ಹಿನ್ನೆಲೆಯಲ್ಲಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಯಾರಿ ನಡೆಸಿದ್ದರು.
ಆದರೆ, ರಸ್ತೆ ಹದಗೆಟ್ಟಿರುವ ಹಿನ್ನೆಲೆ ಮತ್ತು ಮರವನ್ನು ತೆರವುಗೊಳಿಸದ ಕಾರಣ ಯಾವುದೇ ಬಾಡಿಗೆ ವಾಹನಗಳು ಬಂದಿರಲಿಲ್ಲ. ಈ ಸಂದರ್ಭ ಮಗುವಿನ ತಂದೆಯೇ ಕಾಲ್ನಡಿಗೆಯಲ್ಲಿ ಮಗುವನ್ನು ಕರೆದುಕೊಂಡು ಹೋಗುವ ಸಂದರ್ಭ ಮಗು ದಾರಿಮಧ್ಯೆ ಮೃತಪಟ್ಟಿದೆ. ತೋಟದ ಮಾಲೀಕ ಪೂವಯ್ಯ ಹಾಗೂ ದೂರು ನೀಡಿದರೂ ಕ್ರಮಕೈಗೊಳ್ಳದ ಬೇಳೂರು ಗ್ರಾಮ ಪಂಚಾಯಿತಿ ಪಿಡಿಒ ಸುರೇಶ್ ವಿರುದ್ಧ ಸೋಮವಾರಪೇಟೆ ಪೊಲೀಸ್ ಠಾಣೆಗೆ ಮೃತ ಮಗುವಿನ ತಂದೆ ತೇಜಸ್ ದೂರು ನೀಡಿದ್ದಾರೆ.
ಗ್ರಾಮಸ್ಥರ ಆಕ್ರೋಶ: ಈ ಭಾಗದಲ್ಲಿರುವ ಸಂಪರ್ಕ ರಸ್ತೆ ಕಳೆದ ಇಪ್ಪತ್ತು ವರ್ಷಗಳಿಂದ ಅಭಿವೃದ್ಧಿಯಾಗಿಲ್ಲ. ಗ್ರಾಮ ಪಂಚಾಯಿತಿಗೆ ಹಲವಾರು ಬಾರಿ ಮನವಿ ಕೊಟ್ಟಿದ್ದರೂ ರಸ್ತೆ ದುರಸ್ತಿಗೆ ಮುಂದಾಗಲಿಲ್ಲ. ಆರೋಗ್ಯ ಸಮಸ್ಯೆ ಎದುರಾದರೂ ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.