ಸಕಾಲ ಅನುಷ್ಠಾನದಲ್ಲಿ 50 ಬಾರಿ ಜಿಲ್ಲೆ ಪ್ರಥಮ: ರಾಜ್ಯದಲ್ಲಿ ವಿಶಿಷ್ಟ ದಾಖಲೆ ಬರೆದ ಚಿಕ್ಕಬಳ್ಳಾಪುರ

7CBP1
Published on

ಚಿಕ್ಕಬಳ್ಳಾಪುರ: ಸಕಾಲ ಯೋಜನೆಯ ಅನುಷ್ಠಾನದಲ್ಲಿ ರಾಜ್ಯದಲ್ಲಿ ಜಿಲ್ಲಾವಾರು 50 ಬಾರಿ ಪ್ರಥಮ ಸ್ಥಾನ ಸಿಕ್ಕಿದೆ. ಇದು ವಿಶಿಷ್ಟ ದಾಖಲೆಯಾಗಿದೆ. ಇದರ ಗರಿಮೆ ಪಡೆದ ಏಕೈಕ ಜಿಲ್ಲೆ ಚಿಕ್ಕಬಳ್ಳಾಪುರ ಎಂದು ಜಿಲ್ಲಾಧಿಕಾರಿ ಆರ್.ಲತಾ ಸಂತಸ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತ ಭವನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಿಗದಿತ ಕಾಲಮಿತಿಯೊಳಗೆ ಸಾರ್ವಜನಿಕರ ಅಹವಾಲು ಅರ್ಜಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಸಕಾಲ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದ ಜನರು ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಅಲೆಯುವುದು ತಪ್ಪುತ್ತದೆ. ಜತೆಗೆ ಆಡಳಿತವೂ ಪಾರದರ್ಶಕವಾಗಿ ನಡೆಯಲು ಈ ಯೋಜನೆಯು ಸಹಕಾರಿಯಾಗಿದೆ ಎಂದರು.

ಏಪ್ರಿಲ್‌ನಲ್ಲಿ 59,802 ಅರ್ಜಿಗಳನ್ನು ಸಕಾಲ ಯೋಜನೆಯಡಿ ಸ್ವೀಕರಿಸಿದ್ದು, ಈ ಪೈಕಿ ಬಾಕಿ ಉಳಿದಿದ್ದ ಹಳೇ ಅರ್ಜಿಗಳು ಸೇರಿ 59,109 ಅರ್ಜಿಗಳನ್ನು ನಿಯಮಾನುಸಾರ ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡಲಾಗಿದೆ. 2,647 ಅರ್ಜಿಗಳು ಸೂಕ್ತ ದಾಖಲೆಗಳಿಲ್ಲದ ಕಾರಣ ತಿರಸ್ಕೃತಗೊಂಡಿವೆ. 2031 ಅರ್ಜಿಗಳ ಇತ್ಯರ್ಥ ಬಾಕಿ ಇದೆ ಎಂದರು.

ಸಕಾಲ ಯೋಜನೆಯಡಿ ಅರ್ಜಿಗಳ ವಿಲೇವಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಪ್ರತಿ ತಿಂಗಳು ರ‌್ಯಾಂಕಿಂಗ್ ಪಟ್ಟಿ ಪ್ರಕಟಿಸುತ್ತಿದ್ದು ಆಯಾ ಜಿಲ್ಲೆಗಳ ಸಾಧನೆಗೆ ಅನುಗುಣವಾಗಿ ಸ್ಥಾನ ನೀಡಲಾಗುತ್ತದೆ. ಇದಕ್ಕೆ ಕಾಲ ಮಿತಿಯಲ್ಲಿ ಕಡತ ವಿಲೇವಾರಿ ಪ್ರಮುಖ ಮಾನದಂಡ ಎಂದರು.

ಜಿಲ್ಲೆಯು ಉತ್ತಮ ಸಾಧನೆ:ಸಕಾಲ ಯೋಜನೆಯಡಿ ಬಿಡುಗಡೆಯಾದ ಅಂಕಿ ಅಂಶಗಳಲ್ಲೂ ಈ ಸಾಲಿನ ಏಪ್ರಿಲ್‌ನಲ್ಲೂ ಜಿಲ್ಲೆಯು ಪ್ರಥಮ ಸ್ಥಾನ ಗಳಿಸಿದೆ. ಇನ್ನು ಯೋಜನೆ ಆರಂಭವಾದಾಗಿನಿಂದಲೂ (2012ರಿಂದ) ಇಲ್ಲಿಯವರೆಗೂ ಬಿಡುಗಡೆಯಾದ ಪ್ರಗತಿಯ ಅಂಕಿ ಅಂಶಗಳ ಆಧಾರದ ಮೇಲೆ ಚಿಕ್ಕಬಳ್ಳಾಪುರ ರಾಜ್ಯದಲ್ಲಿಯೇ 50 ಬಾರಿ(ತಿಂಗಳು) ಪ್ರಥಮ ಸ್ಥಾನ ಗಳಿಸಿರುವುದು ವಿಶೇಷ ಸಾಧನೆಯಾಗಿದೆ.

ಇನ್ನೂ 14 ಬಾರಿ ದ್ವಿತೀಯ ಹಾಗೂ 10 ಬಾರಿ ತೃತೀಯ ಸ್ಥಾನ ಗಳಿಸಿದೆ. ಈ ಸಾಧನೆ ತೋರಿದ ಏಕೈಕ ಜಿಲ್ಲೆ ಚಿಕ್ಕಬಳ್ಳಾಪುರ. ಇದಕ್ಕೆ ರಾಜ್ಯ ಮಟ್ಟದಲ್ಲಿ 5 ಬಾರಿ ಸರ್ಕಾರದಿಂದ ಪ್ರಶಂಸೆಯನ್ನು ಪಡೆದುಕೊಂಡಿದೆ. ಇತ್ತೀಚೆಗೆ ಕೈಗೊಂಡಿದ್ದ ಸಕಾಲ ದಶಮಾನೋತ್ಸವದಲ್ಲೂ ಜಿಲ್ಲೆಯ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಪ್ರಶಸ್ತಿ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net